ರಾಜ್ಯದ ಹೊರಗೆ ಸಂಚರಿಸಲು ಸಚಿವ ಬಿ.ನಾಗೇಂದ್ರಗೆ ಹೈಕೋರ್ಟ್ ಅನುಮತಿ; ವಿದೇಶ ಪ್ರವಾಸಕ್ಕೆ ಅನುಮತಿ ಕಡ್ಡಾಯ

Update: 2026-08-20 21:02 IST

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಜಾಮೀನು ಮಂಜೂರು ಮಾಡಿದ ಸಂದರ್ಭದಲ್ಲಿ ಪೂರ್ವಾನುಮತಿ ಇಲ್ಲದೆ ರಾಜ್ಯ ಬಿಟ್ಟು ತೆರಳುವಂತಿಲ್ಲ ಎಂದು ಸಚಿವ ಬಿ.ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿದ್ದ ಷರತ್ತನ್ನು ಹೈಕೋರ್ಟ್‌ ರದ್ದುಪಡಿಸಿದೆ. ಇದೇ ವೇಳೆ, ದೇಶದಿಂದ ಹೊರಗೆ ಸಂಚರಿಸಲು ಕೋರ್ಟ್ ಅನುಮತಿ ಕಡ್ಡಾಯವೆಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಜಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2024ರ ಅಕ್ಟೋಬರ್ 14ರಂದು ಜಾಮೀನು ಮಂಜೂರು ಮಾಡಿದಾಗ ವಿಧಿಸಿದ್ದ ಈ ಷರತ್ತು ರದ್ದುಪಡಿಸುವಂತೆ ಕೋರಿ ಸಚಿವ ಬಿ.ನಾಗೇಂದ್ರ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರು ಸದ್ಯ ರಾಜ್ಯ ಸರ್ಕಾರದ ಸಂಪುಟದ ಸಚಿವರಾಗಿದ್ದಾರೆ ಎಂಬುದು ಸತ್ಯ ಸಂಗತಿ. ಇಂತಹ ಸಂದರ್ಭದಲ್ಲಿ ಅವರು ರಾಜ್ಯದ ಗಡಿ ಬಿಟ್ಟು ತೆರಳಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.

ಅರ್ಜಿದಾರರಿಗೆ ಮುಕ್ತವಾಗಿ ದೇಶದಲ್ಲಿ ಪ್ರಯಾಣಿಸಲು ಅನುಮತಿ ನೀಡದೆ ಹೋದರೆ, ಅದು ಅವರ ಸ್ವಾತಂತ್ರ್ಯ ಹಾಗೂ ಸದ್ಯ ಹೊಂದಿರುವ ಸ್ಥಾನಮಾನವನ್ನು ಮೊಟಕುಗೊಳಿಸಿದಂತಾಗುತ್ತದೆ. ಇದರಿಂದ, ರಾಜ್ಯ ಬಿಟ್ಟು ತೆರಳಬಾರದು ಎಂಬ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ಷರತ್ತು ರದ್ದುಪಡಿಸಲಾಗುತ್ತಿದೆ. ಆದರೆ, ಯಾವುದೇ ಸಂದರ್ಭದಲ್ಲಾದರೂ ನಾಗೇಂದ್ರ ಅವರು ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್‌ ಅನುಮತಿ ಪಡೆಯದೇ ದೇಶಬಿಟ್ಟು ವಿದೇಶಕ್ಕೆ ತೆರಳುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯದ ಪರ (ಈಡಿ) ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅರವಿಂದ ಕಾಮತ್‌, ನಾಗೇಂದ್ರ ಅವರು ಸಚಿವರಾಗಿ ನೇಮಕವಾದ ಹಿನ್ನೆಲೆಯಲ್ಲಿ ಆ ಬದಲಾದ ಸನ್ನಿವೇಶದಲ್ಲಿ ಜಾಮೀನು ಮಂಜೂರಾತಿಯ ಷರತ್ತು ರದ್ದತಿಗೆ ಕೋರಿದ್ದಾರೆ. ಸಚಿವರಾಗಿರುವ ಹಿನ್ನೆಲೆಯಲ್ಲಿ ಅವರ ಸ್ವಾತಂತ್ರ್ಯ ಕಸಿದುಕೊಳ್ಳಲಾಗದು. ಆದರೆ, ಆ ಸ್ವಾತಂತ್ರ್ಯವನ್ನು ನಿಯಂತ್ರಣ ಮಾಡಬಹುದು. ಆದ್ದರಿಂದ, ಈ ಮನವಿ ಕುರಿತು ವಿಚಾರಣಾ ನ್ಯಾಯಾಲಯದ ಮುಂದೆಯೇ ಅರ್ಜಿ ಸಲ್ಲಿಸಬಹುದಾಗಿದೆ. ಅದು ಬಿಟ್ಟು ನೇರವಾಗಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ ಎಂದು ಆಕ್ಷೇಪಿಸಿದರು.

ಮುಂದುವರಿದು, ಬದಲಾದ ಸನ್ನಿವೇಶವು ಕಾನೂನುಬದ್ಧ ಮನವಿಯಾಗಿರಬಹುದು. ಆದರೆ, ಈ ಹೈಕೋರ್ಟ್‌ ಆ ಬದಲಾದ ಸನ್ನಿವೇಶವನ್ನು ಪುರಸ್ಕರಿಸಿ ಜಾಮೀನು ಷರತ್ತು ರದ್ದುಪಡಿಸಲಾಗದು. 2024ರಲ್ಲಿ ಅಕ್ಟೋಬರ್‌ನಲ್ಲಿ ಜಾಮೀನು ಮಂಜೂರಾಗಿದೆ. ನಂತರ ಯಾವಾಗ ರಾಜ್ಯಬಿಟ್ಟು ತೆರಳಬೇಕಾದ ಪರಿಸ್ಥಿತಿ ಒದಗಿದ ಬಂದರೂ ವಿಚಾರಣಾ ನ್ಯಾಯಾಲಯ ಅನುಮತಿ ಪಡೆದು ಹೊರ ರಾಜ್ಯಕ್ಕೆ ಪ್ರಯಾಣ ಬೆಳೆಸಿದ್ದಾರೆ. ಆ ವಿಧಾನವನ್ನು ಈಗಲೂ ಅನುಸರಿಸಬಹುದು. ಅದು ಬಿಟ್ಟು ಷರತ್ತು ರದ್ದತಿಗೆ ಕೋರುತ್ತಿರುವುದು ಸರಿಯಲ್ಲ ಎಂದರು.

ಸಚಿವ ನಾಗೇಂದ್ರ ಪರ ಹಿರಿಯ ವಕೀಲ ಕೆ.ಎನ್‌. ಫಣೀಂದ್ರ ವಾದ ಮಂಡಿಸಿ, ಅರ್ಜಿದಾರರು ಸದ್ಯ ರಾಜ್ಯ ಸರ್ಕಾರದ ಸಚಿವ ಸಂಪುಟದ ಸಚಿವರಾಗಿದ್ದಾರೆ. ಅಧಿಕೃತ ಕೆಲಸಗಳ ನಿಮಿತ್ತ ರಾಜ್ಯದ ಗಡಿ ಮೀರಿ ಹೊರ ರಾಜ್ಯಗಳಿಗೆ ತೆರಳಬೇಕಾಗುತ್ತದೆ. ಪ್ರತಿಬಾರಿಯೂ ರಾಜ್ಯದ ಹೊರಗಡೆ ಪ್ರಯಾಣಿಸಬೇಕಾದಾಗ ವಿಚಾರಣಾ ನ್ಯಾಯಾಲಯದ ಮುಂದೆ ಹೋಗಿ ಅನುಮತಿ ಕೋರಲಾಗದು. ಅದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಹಿಂದಿನ ಪರಿಸ್ಥಿತಿ ಈಗಿಲ್ಲದ ಕಾರಣ ಅರ್ಜಿದಾರರ ಮನವಿ ಪುರಸ್ಕರಿಸಬೇಕು ಎಂದು ಕೋರಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News