ಮುಂಬೈನಲ್ಲಿ ಸೆ. 5 ರಿಂದ BRICS ರಾಷ್ಟ್ರಗಳ ಸಾಂಸ್ಕೃತಿಕ ಪರಂಪರೆ ಅನಾವರಣಕ್ಕೆ ‘ಗ್ಲೋಬಲ್ ಇಂಪ್ಯಾಕ್ಟ್ ಫೋರಂ II’ ಸಮಾವೇಶ

Update: 2026-08-20 23:38 IST

ಬೆಂಗಳೂರು: ಬ್ರಿಕ್ಸ್ (BRICS) ರಾಷ್ಟ್ರಗಳ ಸಾಂಸ್ಕೃತಿಕ ಬಾಂಧವ್ಯ, ಪಾರಂಪರಿಕ ಜ್ಞಾನ ಹಾಗೂ ನಾಗರಿಕತೆಯ ಪರಂಪರೆಯನ್ನು ಸಂಭ್ರಮಿಸುವ ಉದ್ದೇಶದಿಂದ ‘ಗ್ಲೋಬಲ್ ಇಂಪ್ಯಾಕ್ಟ್ ಫೋರಂ (ಜಿಐಎಫ್ II): ಸಿವಿಲೈಸೇಶನಲ್ ಲೆಗಸಿ’ ಸಮಾವೇಶ ಸೆಪ್ಟೆಂಬರ್ 5 ಮತ್ತು 6ರಂದು ಮುಂಬೈನ ದಿ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ ನಡೆಯಲಿದೆ ಎಂದು ಎಪಿ ಗ್ಲೋಬಲ್ ಸಂಸ್ಥೆಯ ನಿರ್ದೇಶಕಿ ಜಾನ್ಹವಿ ಪವಾರ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಪಿ ಗ್ಲೋಬಲ್ ಸಂಸ್ಥೆ ಆಯೋಜಿಸುತ್ತಿರುವ ಎರಡು ದಿನಗಳ ಸಮಾವೇಶ ಭಾರತದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಪ್ರತಿದಿನ ರಾಯಭಾರಿಗಳು, ಹೂಡಿಕೆದಾರರು, ಉದ್ಯಮಿಗಳು ಹಾಗೂ ವಿದ್ವಾಂಸರು ಸೇರಿದಂತೆ 500ಕ್ಕೂ ಹೆಚ್ಚು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಸಮಾವೇಶದಲ್ಲಿ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳು, ಸಮರ ಕಲೆಗಳು, ಶಾಸ್ತ್ರೀಯ ನೃತ್ಯಗಳು, ಸಾಹಿತ್ಯ ಹಾಗೂ ಜಾನಪದ ಸಂಸ್ಕೃತಿಗಳ ಕುರಿತು ಸಂವಾದಗಳು ಮತ್ತು ಕಾರ್ಯಾಗಾರಗಳು ನಡೆಯಲಿವೆ ಎಂದು ಹೇಳಿದರು.

ದಕ್ಷಿಣ ಆಫ್ರಿಕಾದ ಕಾನ್ಸುಲ್ ಜನರಲ್ ಹೆಚ್.ಇ. ಜಿ. ಲಬಾನೆ ಮಾತನಾಡಿ, ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ ಉತ್ತಮ ನಾಗರಿಕತೆಯ ನಂಟಿದೆ. ದಕ್ಷಿಣ ಆಫ್ರಿಕಾದ ಖನಿಜ ಸಂಪನ್ಮೂಲಗಳನ್ನು ಭಾರತದ ತಂತ್ರಜ್ಞಾನ ಹಾಗೂ ಔಷಧೀಯ ಸಾಮರ್ಥ್ಯದೊಂದಿಗೆ ಸಂಯೋಜಿಸಿ ವ್ಯೂಹಾತ್ಮಕ ಆರ್ಥಿಕ ಪಾಲುದಾರಿಕೆಯಾಗಿ ರೂಪಿಸಲು ಇದು ಸೂಕ್ತ ಸಮಯವಾಗಿದೆ ಎಂದರು.

ಸಾಂಸ್ಕೃತಿಕ ವಿನಿಮಯದ ಜತೆಗೆ ಭವಿಷ್ಯದ ಆವಿಷ್ಕಾರಗಳಿಗೂ ಸಮಾವೇಶದಲ್ಲಿ ಆದ್ಯತೆ ನೀಡಲಾಗುತ್ತಿದೆ. ವಿಸಿ ಗ್ರಿಡ್ ಮತ್ತು ವೆಂಚರ್ ಕ್ಯಾಟಲಿಸ್ಟ್ಸ್ ಸಹಯೋಗದಲ್ಲಿ ಇವಿ, ಸುಸ್ಥಿರತೆ, ಲಾಜಿಸ್ಟಿಕ್ಸ್, ಡೀಪ್‌ಟೆಕ್ ಹಾಗೂ ಗ್ರಾಮೀಣ ಹಣಕಾಸು ಕ್ಷೇತ್ರಗಳ 12 ಭಾರತೀಯ ಸ್ಟಾರ್ಟಪ್‌ಗಳನ್ನು ಜಾಗತಿಕ ಹೂಡಿಕೆದಾರರ ಮುಂದೆ ಪರಿಚಯಿಸಲಾಗುವುದು ಎಂದು ಫೈಝಾನ್ ಮುನ್ಷಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News