×
Ad

ಎಚ್‍ಎಂಟಿ ಭೂಮಿಗೆ ಐಎ ಹಾಕಿದ ಅಧಿಕಾರಿಗಳ ವಿರುದ್ಧ ಕ್ರಮ: ಈಶ್ವರ್ ಖಂಡ್ರೆ

Update: 2025-01-20 22:02 IST

ಈಶ್ವರ್ ಖಂಡ್ರೆ

ಬೆಂಗಳೂರು : ಎಚ್‍ಎಂಟಿ ವಶದಲ್ಲಿರುವ ಭೂಮಿ ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಸಚಿವ ಸಂಪುಟದ ಅನುಮತಿ ಪಡೆಯದೆ ಸುಪ್ರೀಂ ಕೋರ್ಟ್‍ಗೆ ಡಿನೋಟಿಫಿಕೇಷನ್ ಅನುಮತಿ ಕೋರಿ ಐ.ಎ. ಹಾಕಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು ಅವರ ಉತ್ತರ ಪರಿಶೀಲಿಸಿ ಕ್ರಮ ಕೈಗೊಳ್ಳುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎಚ್‍ಎಂಟಿ ವಶದಲ್ಲಿರುವ 443 ಎಕರೆ ಅರಣ್ಯ ಭೂಮಿ ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ತಿಳಿಸಿ ಕೆಲವು ಅಧಿಕಾರಿಗಳು, ಸಚಿವ ಸಂಪುಟದ ಗಮನಕ್ಕೂ ತಾರದೆ ತಾವೇ 2020ರಲ್ಲಿ ಸುಪ್ರೀಂಕೋರ್ಟ್‍ನಲ್ಲಿ ಇಂಟರ್ ಲೊಕೇಟರಿ ಅರ್ಜಿ(ಐ.ಎ.) ಹಾಕಿದ್ದರು. ಈ ಐ.ಎ. ಹಿಂಪಡೆಯಲು ಈಗಾಗಲೇ ಸೂಚಿಸಲಾಗಿದೆ ಎಂದರು.

ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ಐಎ ಹಿಂಪಡೆಯಲು, ಘಟನೋತ್ತರ ಅನುಮೋದನೆ ನೀಡಲಾಗಿದೆ. ಇದಕ್ಕಾಗಿ ಮುಖ್ಯಮಂತ್ರಿಗಳು ಮತ್ತು ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಈಶ್ವರ್ ಖಂಡ್ರೆ ಹೇಳಿದರು.

ಎಚ್‍ಎಂಟಿ ಖಾಸಗಿ ಸಂಸ್ಥೆಗಳೂ ಸೇರಿದಂತೆ ಹಲವು ಸಂಸ್ಥೆಗಳಿಗೆ ಈಗಾಗಲೇ 160 ಎಕರೆ ಜಮೀನನ್ನು 313 ಕೋಟಿ ರೂ.ಗಳಿಗೆ ಮಾರಾಟ ಮಾಡಿದೆ. ಆದರೆ, ಆಗ ಸುಪ್ರೀಂಕೋರ್ಟ್‍ಗೆ ಸಲ್ಲಿಸುವ ಪ್ರಮಾಣ ಪತ್ರದಲ್ಲಿ ಈ ಭೂಮಿಯ ಮೌಲ್ಯ 14,300 ಕೋಟಿ ರೂ. ಎಂದು ಹೇಳಿಕೊಂಡಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.

ಆದರೆ, ಈ ಭೂಮಿಯ ಮೌಲ್ಯ ಅತ್ಯಮೂಲ್ಯವಾದ್ದು. ಬೆಂಗಳೂರು ನಗರಕ್ಕೆ ಅತ್ಯಗತ್ಯವಾಗಿ ಬೇಕಾದ ಶ್ವಾಸತಾಣ. ಇದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಇಂತಹ ಭೂಮಿಯನ್ನು ನಷ್ಟದಿಂದ ಮುಚ್ಚಿ ಹೋಗಿರುವ ಎಚ್‍ಎಂಟಿ ಅಕ್ರಮವಾಗಿ ಖಾಸಗಿಯವರಿಗೆ ಮಾರಾಟ ಮಾಡಿ ರಿಯಲ್ ಎಸ್ಟೇಟ್ ಮಾಡಲು ಬಿಡುವುದಿಲ್ಲ. ಈ ಭೂಮಿಯನ್ನು ಮರಳಿ ವಶಕ್ಕೆ ಪಡೆದು ಅಲ್ಲಿ ಕಬ್ಬನ್ ಪಾರ್ಕ್ ಅಥವಾ ಲಾಲ್ ಬಾಗ್ ರೀತಿಯಲ್ಲಿ ಒಂದು ಉದ್ಯಾನ ನಿರ್ಮಿಸಲಾಗುವುದು. ಇದು ಏಳು ಕೋಟಿ ಕನ್ನಡಿಗರ ಆಸ್ತಿ. ಇದರ ರಕ್ಷಣೆಗೆ ಎಲ್ಲ ಕನ್ನಡಿಗರೂ ಸರಕಾರದ ಜೊತೆ ನಿಲ್ಲಬೇಕು ಎಂದು ಈಶ್ವರ್ ಖಂಡ್ರೆ ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News