×
Ad

ಮೈಕ್ರೋಫೈನಾನ್ಸ್ ದೌರ್ಜನ್ಯ ಕುರಿತು ದೂರು ನೀಡಿದರೆ ಕ್ರಮ : ಗೃಹ ಸಚಿವ ಪರಮೇಶ್ವರ್

Update: 2025-01-29 13:25 IST

ಡಾ.ಜಿ.ಪರಮೇಶ್ವರ್‌ 

ಬೆಂಗಳೂರು : ಮೈಕ್ರೋಫೈನಾನ್ಸ್ ಸಂಸ್ಥೆಗಳು ದೌರ್ಜನ್ಯ, ತೊಂದರೆ ನೀಡುತ್ತಿರುವ ಕುರಿತು ಪೊಲೀಸರಿಗೆ ದೂರು ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಹೇಳಿದರು.

ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರು ಬಂದ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಸುಮೋಟೊ ಪ್ರಕರಣ ದಾಖಲಿಸುವಂತೆಯೂ ತಿಳಿಸಲಾಗಿದೆ ಎಂದರು.

ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದನ್ನು ತಡೆಯಲು ಕಾನೂನು ರೂಪಿಸಲಾಗುತ್ತಿದ್ದು, ಕಾನೂನು ಸಚಿವರು ಹಾಗೂ ಕಂದಾಯ ಸಚಿವರೊಂದಿಗೆ ಸಭೆ ಕರೆಯಲಾಗಿದೆ. ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂಬ ನಿಟ್ಟಿನಲ್ಲಿ ಕಾನೂನು ರೂಪಿಸಲಾಗುತ್ತಿದೆ. ಸಹಾಯವಾಣಿಯನ್ನು ಆರಂಭಿಸಲಾಗುವುದು. ಸಭೆಯಲ್ಲಿ ಅಂತಿಮವಾದರೆ ನಾಳೆ ಕ್ಯಾಬಿನೆಟ್ ಮುಂದೆ ತರುತ್ತೇವೆ ಎಂದು ಹೇಳಿದರು.

ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ತುಮಕೂರಿಗೆ ನೀಡುವಂತೆ ಕೇಳುತ್ತಿದ್ದೇವೆ. ತುಮಕೂರಿನ ಭಾಗದಲ್ಲಿ ನಿರ್ಮಾಣವಾದರೆ ಉತ್ತರ ಕರ್ನಾಟಕ ಭಾಗದ 21 ಜಿಲ್ಲೆಗಳಿಗೂ ಅನುಕೂಲವಾಗಲಿದೆ. ಈಗಿರುವ ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಂಪರ್ಕವಾಗುತ್ತದೆ ಎಂದರು.

ತುಮಕೂರುವರೆಗೆ ಮೆಟ್ರೋ ಯೋಜನೆ ಡಿಪಿಆರ್ ಇನ್ನು ಅಂತಿಮವಾಗಿಲ್ಲ. ಹೈದರಾಬಾದ್ ಕಂಪನಿಗೆ ನೀಡಲಾಗಿದ್ದು, ಡಿಪಿಆರ್ ವರದಿ ನೀಡಿಲ್ಲ. ವರದಿ ನೀಡಿದ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ. ನಂತರ ಕೇಂದ್ರ ಸರಕಾರದ ಅನುಮತಿ ಕೇಳುತ್ತೇವೆ ಎಂದು ಹೇಳಿದರು.

ಸಿಎಂ ನೇಮಕ ಮಾಡುವುದು ಹೈಕಮಾಂಡ್. ಶಾಸಕರ ಅಭಿಪ್ರಾಯ ಕೇಳಬೇಕಿಲ್ಲ ಎಂದು ರಾಮನಗರ ಶಾಸಕರ ಹೇಳಿಕೆ ನೀಡಿದ್ದಾರೆ. ಹೈಕಮಾಂಡ್ ಸೂಚನೆ ಶಾಸಕರಿಗೆ ಅನ್ವಯವಾಗುವುದಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಹೈಕಮಾಂಡ್ ಸೂಚನೆ ಶಾಸಕರಿಗೆ, ಮಂತ್ರಿಗಳಿಗೆ ಹಾಗೂ ಎಲ್ಲರಿಗೂ ಅನ್ವಯವಾಗುತ್ತದೆ. ಪಕ್ಷದಲ್ಲಿ ಯಾರು ಆ ರೀತಿ ಹೇಳಿಕೆ ಕೊಡಬಾರದು ಎಂದು ಹೈಕಮಾಂಡ್ ಸೂಚಿಸಿದ ಮೇಲೆ ಎಲ್ಲರಿಗೂ ಅನ್ವಯವಾಗುತ್ತದೆ. ಅವರಿಗೆ ಹೈಕಮಾಂಡ್ ಮತ್ತೆ ಹೇಳುತ್ತಾರೆ ಎಂದರು.

ಹೈಕಮಾಂಡ್ ಮತ್ತು ಶಾಸಕರು ಆಯ್ಕೆ ಮಾಡುತ್ತಾರೆ. ಮೊದಲು ಶಾಸಕರ ಅಭಿಪ್ರಾಯ ಪಡೆಯುತ್ತಾರೆ. ಆನಂತರ ಅವರು ತೀರ್ಮಾನ ಮಾಡುತ್ತಾರೆ. ಬೆಂಬಲ ಸೇರಿದಂತೆ ಬೇರೆಬೇರೆ ವಿಚಾರಗಳನ್ನು ಆಧರಿಸಿ ಪ್ರಕಟಿಸುತ್ತಾರೆ ಎಂದು ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News