ಅತ್ಯಾಚಾರ ಆರೋಪ : ನಟ ಮಡೆನೂರು ಮನುಗೆ 14 ದಿನ ನ್ಯಾಯಾಂಗ ಬಂಧನ
ಮಡೆನೂರು ಮನು
ಬೆಂಗಳೂರು : ಸಹ ಕಲಾವಿದೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಪ್ರಕರಣದಡಿಯಲ್ಲಿ ಚಿತ್ರನಟ ಮಡೆನೂರು ಮನುಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 3ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
5 ದಿನಗಳ ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಸೋಮವಾರ ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು, ಮಲ್ಲತ್ತಹಳ್ಳಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಪಿ ಮಡೆನೂರು ಮನುಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಬಳಿಕ ಮಧ್ಯಾಹ್ನ ಬೆಂಗಳೂರಿನ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ಈ ವೇಳೆ ಆರೋಪಿ ಮಡೆನೂರು ಮನು ಪರ ವಕೀಲರು ಹಾಗೂ ಸಂತ್ರಸ್ತೆಯ ಪರ ವಕೀಲೆಯ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಅಂತಿಮವಾಗಿ ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತೀರ್ಪು ನೀಡಿದರು.
ಈ ಹಿಂದೆ ಖಾಸಗಿ ವಾಹಿನಿಯ ರಿಯಾಲಿಟಿ ಶೋವೊಂದರಲ್ಲಿ ನಟ ಮಡೆನೂರು ಮನು ಭಾಗಿಯಾಗಿದ್ದರು. ಅದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಹ ಸ್ಪರ್ಧಿಯೊಬ್ಬರು ಅತ್ಯಾಚಾರ ಆರೋಪದಡಿ ನೀಡಿದ್ದ ದೂರಿನನ್ವಯ ಮನು ವಿರುದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು.
2022ರಲ್ಲಿ ಕಾಮಿಡಿ ಕಾರ್ಯಕ್ರಮವೊಂದಕ್ಕೆ ಶಿಕಾರಿಪುರಕ್ಕೆ ತೆರಳಿದ್ದಾಗ, ತನ್ನ ಮೇಲೆ ನಟ ಮಡೆನೂರು ಮನು ಅತ್ಯಾಚಾರವೆಸಗಿದ್ದ. ಆ ನಂತರವೂ ನಿರಂತರವಾಗಿ ಅತ್ಯಾಚಾರವೆಸಗಿದ್ದು, ಗರ್ಭಪಾತ ಮಾಡಿಸಿದ್ದಾನೆ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ಆರೋಪಿಸಿದ್ದರು. ಮೇ 22ರಂದು ಆರೋಪಿ ಮನು ಅವರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿ ಕಸ್ಟಡಿಗೆ ಪಡೆದುಕೊಂಡಿದ್ದರು.