ನಾಳೆ (ಮೇ 30) ಬೆಂಗಳೂರಿನಲ್ಲಿ ʼವಿಕಲಚೇತನರ ಸಬಲೀಕರಣಕ್ಕಾಗಿ ಕೃತಕ ಬುದ್ಧಿಮತ್ತೆʼ ಸಮ್ಮೇಳನ
ಬೆಂಗಳೂರು : ವಿಶೇಷ ಚೇತನ ವ್ಯಕ್ತಿಗಳ ಸಬಲೀಕರಣ ಇಲಾಖೆಯು(ಡಿಇಪಿಡಬ್ಲೂಡಿ), ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತೀಯ ಕೃತಕ ಅಂಗಗಳ ಉತ್ಪಾದನಾ ನಿಗಮ (ಎಎಲ್ ಐಎಂಸಿಒ) ಸಹಯೋಗದೊಂದಿಗೆ ʼವಿಕಲಚೇತನರ ಸಬಲೀಕರಣಕ್ಕಾಗಿ ಕೃತಕ ಬುದ್ಧಿಮತ್ತೆʼ ಎಂಬ ಶೀರ್ಷಿಕೆಯಡಿ ಮಹತ್ವದ ಸಮ್ಮೇಳನವನ್ನು ನಾಳೆ (ಮೇ 30) ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
ಈ ಉಪಕ್ರಮವು ವಿಶೇಷಚೇತನರಿಗೆ ಎಲ್ಲರನ್ನೂ ಒಳಗೊಂಡ, ಸುಲಭವಾಗಿ ಲಭ್ಯವಿರುವ ಮತ್ತು ಸಹಾಯಕ ಪರಿಹಾರಗಳನ್ನು ಒದಗಿಸುವಲ್ಲಿ ಕೃತಕ ಬುದ್ಧಿಮತ್ತೆ(ಎಐ)ಯ ಪರಿವರ್ತನಾತ್ಮಕ ಪಾತ್ರವನ್ನು ಎತ್ತಿ ತೋರಿಸುವ ಗುರಿಯನ್ನು ಹೊಂದಿದೆ. ಸಮ್ಮೇಳನವು ವಿಶ್ವದಾದ್ಯಂತದ ಪ್ರಖ್ಯಾತ ಶಿಕ್ಷಣ ತಜ್ಞರು, ತಂತ್ರಜ್ಞರು, ನಾವೀನ್ಯಕಾರರು, ನೀತಿ ನಿರೂಪಕರು, ನವೋದ್ಯಮಗಳು ಮತ್ತು ಪಾಲುದಾರರನ್ನು ಒಗ್ಗೂಡಿಸಿ ವಿಶೇಷ ಚೇತನರ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಅತ್ಯಾಧುನಿಕ ಎಐ ಬಳಕೆ ಕುರಿತು ಚರ್ಚಿಸಲು, ಪ್ರದರ್ಶಿಸಲು ಮತ್ತು ಸಮಾಲೋಚಿಸಲು ಅನುವು ಮಾಡಿಕೊಡುತ್ತದೆ.
ದಿನವಿಡೀ ನಡೆಯುವ ಸಮ್ಮೇಳನವು ಡಿಇಪಿಡಬ್ಲ್ಯೂಡಿ ಕಾರ್ಯದರ್ಶಿ ರಾಜೇಶ್ ಅಗರ್ ವಾಲ್ , ಪ್ರೊ.ಪಿವಿಎಂ ರಾವ್ (ಐಐಟಿ ದೆಹಲಿ) ಮತ್ತು ಪ್ರೊ.ವೇಣು ಗೋವಿಂದರಾಜು ( ಬಫಲೋ ವಿಶ್ವವಿದ್ಯಾಲಯ, ಅಮೆರಿಕಾ) ಅವರ ವಿಶೇಷ ಭಾಷಣದೊಂದಿಗೆ ಆರಂಭವಾಗಲಿದೆ. ಆನಂತರ ಪ್ರಮುಖ ಗೋಷ್ಠಿಗಳ ಸರಣಿಯು ನಡೆಯಲಿದೆ.
ಪ್ರಮುಖ ಗೋಷ್ಠಿಗಳು :
► ಕೃತಕ ಬುದ್ಧಿಮತ್ತೆ ಲಭ್ಯತೆ ಮಿಷನ್
► ಕೃತಕ ಬುದ್ಧಿಮತ್ತೆ (ಎಐ) ಮಿಷನ್: ವಿಶೇಷಚೇತನರನ್ನು ಸಬಲೀಕರಣಗೊಳಿಸಲು ಸಹಾಯಕ ತಂತ್ರಜ್ಞಾನ ಮತ್ತು ಪರಿಕರಗಳಲ್ಲಿ ಎಐ ಅನುಷ್ಠಾನ
► ರಾಷ್ಟ್ರೀಯ ವಿಶೇಷಚೇತನರ ಬೆಂಬಲಿತ ಎಐ ಚಾಟ್ ಬಾಟ್
► ಏಕೀಕೃತ ಪ್ರಯೋಜನಗಳ ಇಂಟರ್ಫೇಸ್ (ಯುಬಿಐ)
1. ಸಂವಾದ ಗೋಷ್ಠಿಗಳು
* ಸಮಗ್ರ ಭಾರತಕ್ಕಾಗಿ ನಾವೀನ್ಯತೆಗಳು: ಐಐಟಿ, ಎಐಐಎಂಎಸ್, ಓಪನ್ ಎಐ, ಅನುವಾದಿನಿ, ಸಿಎಸ್ ಐಒ, ಸರ್ವಮ್ ಎಐ, ಮತ್ತು ಕಾರ್ಯ ಇಂಕ್ ನಿಂದ ಧ್ವನಿಗಳನ್ನು ಒಳಗೊಂಡಿದೆ.
* ಸಹಾಯಕ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಎಐ: ಮೈಕ್ರೋಸಾಫ್ಟ್, ಲೆನೊವೊ, ಭಾಷಿಣಿ, ಸ್ಟಾಕ್‌ಜೆನ್, ಈಕ್ವಿಬೀಯಿಂಗ್ ಫೌಂಡೇಶನ್ ಮತ್ತು ಇತರರು ಭಾಗವಹಿಸಲಿದ್ದಾರೆ.
2. ಅನುಭವ ಹಂಚಿಕೆ ಗೋಷ್ಠಿಗಳು: ಪರಿವರ್ತನೆಯ ನೈಜ ಜೀವನದ ಕಥೆಗಳನ್ನು ಪ್ರಮುಖ ಉದ್ಯಮಿಗಳು, ಬದಲಾವಣೆ ಮಾಡುವವರು ಮತ್ತು ಸಹಾಯಕ ತಂತ್ರಜ್ಞಾನ ಪರಿಹಾರಗಳ ಫಲಾನುಭವಿಗಳು ಹಂಚಿಕೊಳ್ಳುತ್ತಾರೆ, ಅವರಲ್ಲಿ ಏಕಾನ್ಶ್ ಅಗರ್ವಾಲ್ (ಸ್ವರ್ ಸ್ಮಾರ್ಟ್ ಸೊಲ್ಯೂಷನ್ಸ್), ಗೋಪಿಕೃಷ್ಣನ್ ಎಸ್. (ಸುನ್ವಾ.ಎಐ), ಅರ್ಮಾನ್ ಅಲಿ (ಎನ್‌ಸಿಪಿಇಡಿಪಿ) ಮತ್ತು ಇತರರು ಸೇರಿದ್ದಾರೆ.
3. ತಂತ್ರಜ್ಞಾನ ಪ್ರದರ್ಶನಗಳು: ಭಾರತ ಎಐ ಚಾಲೆಂಜ್ (ಎಂಇಐಟಿವೈ) ಅಡಿಯಲ್ಲಿ ನವೋದ್ಯಮಗಳು ಮತ್ತು ಇತರ ಜಾಗತಿಕ ನಾವೀನ್ಯಕಾರರು ಅಭಿವೃದ್ಧಿ, ದೃಶ್ಯ, ಶ್ರವಣ ಮತ್ತು ಬಹು ಅಂಗವೈಕಲ್ಯಗಳಿಗೆ ಸಹಾಯಕ ಸಾಧನಗಳಲ್ಲಿ ತಮ್ಮ ಪ್ರಗತಿಯನ್ನು ಪ್ರದರ್ಶಿಸುತ್ತಾರೆ. ಪ್ರಮುಖವಾಗಿ ಭಾಗವಹಿಸುವವರಲ್ಲಿ ಡಾಟ್ ಇಂಕ್ (ದಕ್ಷಿಣ ಕೊರಿಯಾ), ಟಾರ್ಚಿಟ್, ಸನ್‌ಬಾಟ್ಸ್ ಇನ್ನೋವೇಶನ್ಸ್, ಸೋಹಮ್ ಇನ್ನೋವೇಶನ್ ಲ್ಯಾಬ್ಸ್, ಇಂಡಿಕ್ ಎಐ, ಬ್ಯಾರಿಯರ್ ಬ್ರೇಕ್, ಖಯಾಲ್ ಮತ್ತಿತರರು ಸೇರಿದ್ದಾರೆ.
4. ಸಾಂಸ್ಕೃತಿಕ ಪ್ರದರ್ಶನ: ಸೃಜನಶೀಲ ಆಯಾಮವನ್ನು ಒಳಗೊಂಡಂತೆ ಮಿರಾಕಲ್ಸ್ ಆನ್ ವೀಲ್ಸ್ , ಪ್ರತಿಭೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಬಿಂಬಿಸಲು ವಿಶೇಷವಾಗಿ ಸಂಗ್ರಹಿಸಲಾದ ಸಾಂಸ್ಕೃತಿಕ ಪ್ರದರ್ಶನವನ್ನು ಪ್ರಸ್ತುತಪಡಿಸುತ್ತದೆ.
ಸಮ್ಮೇಳನವು ಸಂವಾದಾತ್ಮಕ ಪ್ರಶ್ನೋತ್ತರ ಗೋಷ್ಠಿಯೊಂದಿಗೆ ಸಮಾಪನಗೊಳ್ಳಲಿದೆ, ನಂತರ ರಾಜೇಶ್ ಅಗರ್ವಾಲ್ ಅವರ 'ಮುಂದಿನ ಹಾದಿ(ವೇ ಫಾರ್ವಡ್)' ಕುರಿತ ಭಾಷಣವು ಸಮಗ್ರ ಅಭಿವೃದ್ಧಿಗಾಗಿ ಕೃತಕ ಬುದ್ಧಿಮತ್ತೆ ಕಾರ್ಯತಂತ್ರದ ನೀಲನಕ್ಷೆಯನ್ನು ಹಾಕಿಕೊಡಲಿದೆ.
ಈ ಕಾರ್ಯಕ್ರಮವು ಪಾಲುದಾರರಿಗೆ ಸಹಯೋಗಗಳನ್ನು ಹೊಂದಲು ಮತ್ತು ಭವಿಷ್ಯಕ್ಕೆ ಸಿದ್ಧವಾದ, ಸಮಗ್ರ ತಂತ್ರಜ್ಞಾನ ಪರಿಹಾರಗಳ ಕುರಿತು ಮತ್ತಷ್ಟು ಆಲೋಚನೆಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುತ್ತದೆ ಎಂದು ಪ್ರಕಟನೆ ತಿಳಿಸಿದೆ.