ಕನಿಷ್ಠ ವೇತನ ಜಾರಿಗೊಳಿಸಲು ಆಗ್ರಹಿಸಿ ಎಐಸಿಸಿಟಿಯು ಧರಣಿ
ಬೆಂಗಳೂರು : ಗುತ್ತಿಗೆ, ಹೊರಗುತ್ತಿಗೆ ಪದ್ಧತಿ ರದ್ದುಪಡಿಸಿ, ನೇರ ವೇತನ ಪಾವತಿ ಜಾರಿಗೊಳಿಸಬೇಕು ಹಾಗೂ ಪರಿಷ್ಕೃತ ಕನಿಷ್ಠ ವೇತನವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಆಗ್ರಹಿಸಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್(ಎಐಸಿಸಿಟಿಯು) ವತಿಯಿಂದ ಗುರುವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಲಾಯಿತು.
ಈ ವೇಳೆ ಮಾತನಾಡಿದ ಯೂನಿಯನ್‍ನ ರಾಷ್ಟ್ರೀಯ ಉಪಾಧ್ಯಕ್ಷ ಕ್ಲಿಫ್ಟನ್ ಡಿ ರೋಝಾರಿಯೊ, ರಾಜ್ಯದ ಕಾರ್ಖಾನೆಗಳು, ಸರಕಾರಿ ಕಚೇರಿಗಳು, ಆಸ್ಪತ್ರೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ಸಂಬಂಧಿಸಿದ ನಿರಂತರ ಹಾಗೂ ಮೂಲಭೂತ ಸ್ವರೂಪದ ಕೆಲಸಗಳನ್ನು ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರ ಮೂಲಕ ನಿರ್ವಹಿಸಲಾಗುತ್ತಿದೆ. ಅನೇಕ ಕಾರ್ಮಿಕರು ಒಂದೇ ಸಂಸ್ಥೆಯಲ್ಲಿ 10, 20, 25 ಹಾಗೂ 30 ವರ್ಷಗಳವರೆಗೆ ಸೇವೆ ಸಲ್ಲಿಸುತ್ತಿದ್ದರೂ ಅವರಿಗೆ ಖಾಯಂ ಉದ್ಯೋಗ, ಉದ್ಯೋಗ ಭದ್ರತೆ ಮತ್ತು ಸಮರ್ಪಕ ಸಾಮಾಜಿಕ ಭದ್ರತೆ ದೊರೆಯುತ್ತಿಲ್ಲ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಮೈತ್ರಿ ಕೃಷ್ಣನ್ ಮಾತನಾಡಿ, ಮೇ.22ರಂದು ಸರಕಾರ ಅಧಿಸೂಚನೆಗೊಳಿಸಿರುವ ಪರಿಷ್ಕೃತ ಕನಿಷ್ಠ ವೇತನವನ್ನು ಯಾವುದೇ ಕಾರಣಕ್ಕೂ ತಡೆಹಿಡಿಯಬಾರದು ಅಥವಾ ವಿಳಂಬಗೊಳಿಸಬಾರದು ಎಂದು ಆಗ್ರಹಿಸಿದರು.
ಅಧಿಸೂಚಿತ ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ಪಾವತಿಸುವ ಉದ್ಯೋಗದಾತರ ವಿರುದ್ಧ ಕಾರ್ಮಿಕ ಇಲಾಖೆ ತಕ್ಷಣವೇ ತಪಾಸಣೆ ನಡೆಸಬೇಕು. ಬಾಕಿ ಇರುವ ವೇತನವನ್ನು ವಸೂಲಿ ಮಾಡಿಸಿ, ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಕಾರ್ಮಿಕರ ಹಕ್ಕುಗಳನ್ನು ಉಲ್ಲಂಘಿಸುವ ಉದ್ಯೋಗದಾತರ ವಿರುದ್ಧ ಅಗತ್ಯವಿದ್ದಲ್ಲಿ ದೋಷರೋಪಣೆ ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ನಿರಂತರವಾಗಿ ಏರುತ್ತಿರುವ ಜೀವನ ವೆಚ್ಚವನ್ನು ಪರಿಗಣಿಸಿ, ಕಾರ್ಮಿಕರ ಕನಿಷ್ಠ ವೇತನವನ್ನು ತಿಂಗಳಿಗೆ ಕನಿಷ್ಠ 42 ಸಾವಿರ ರೂ.ಗಳಿಗೆ ಪರಿಷ್ಕರಿಸಬೇಕು ಎಂದು ಆಗ್ರಹಿಸಿದರು.
ಧರಣಿ ಸ್ಥಳಕ್ಕೆ ಭೇಟಿ ನೀಡಿದ ಕರ್ನಾಟಕ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಾಘು ಹಾಗೂ ಕಾರ್ಮಿಕ ಆಯುಕ್ತರಾದ ರಾಗಪ್ರಿಯ ಅವರು ಸರಕಾರದ ಪರವಾಗಿ ಎಐಸಿಸಿಟಿಯು ಸಲ್ಲಿಸಿದ ಮನವಿ ಸ್ವೀಕರಿಸಿದರು. ಧರಣಿಯಲ್ಲಿ ಮುಖಂಡರಾದ ಅಪ್ಪಣ್ಣ, ನಿರ್ಮಲಾ, ನಾಗರಾಜ ಪೂಜಾರ್, ಮೋಹನ್, ರಾಮಣ್ಣ ವಿಟ್ಲ, ಕೆ.ನಾಗಲಿಂಗಸ್ವಾಮಿ, ಅಜೀಝ್ ಜಾಗೀದಾರ್, ಕೇಶವ ನಾಯಕ್, ಅಶೋಕಗೌಡ, ಮಾಯಮ್ಮ, ಪರಶುರಾಮ, ಉಮಾ, ಭಾನುಪ್ರಕಾಶ್, ಬಸವರಾಜ ಎಂ., ಗೌರಿ, ಚಂದ್ರಶೇಖರ್ ಶಿರುಗುಪ್ಪಿ ಮತ್ತಿತರರು ಹಾಜರಿದ್ದರು.
ಪ್ರಮುಖ ಬೇಡಿಕೆಗಳು : ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ, ತಾತ್ಕಾಲಿಕ ಪದ್ಧತಿಗಳನ್ನು ರದ್ದುಪಡಿಸಿ, ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರಿಗೆ ನೇರ ವೇತನ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಎಲ್ಲ ಕಾರ್ಮಿಕರಿಗೆ ಇಎಸ್‍ಐ ಸೌಲಭ್ಯವನ್ನು ಖಚಿತಪಡಿಸಬೇಕು. ಇಎಸ್‍ಐ ವೇತನ ಮಿತಿಯನ್ನು ಸಮರ್ಪಕವಾಗಿ ಪರಿಷ್ಕರಿಸಲು ಕೇಂದ್ರ ಸರಕಾರದ ಮೇಲೆ ರಾಜ್ಯ ಸರಕಾರ ಒತ್ತಡ ಹೇರಬೇಕು. ಪ್ರತಿ ಕಾರ್ಮಿಕರಿಗೂ ಕೆಲಸಕ್ಕೆ ಸೇರಿದ ದಿನದಿಂದಲೇ ಉದ್ಯೋಗ ಭದ್ರತೆ ಹಾಗೂ ಎಲ್ಲ ಕಾನೂನುಬದ್ಧ ಹಕ್ಕುಗಳನ್ನು ಖಚಿತಪಡಿಸಬೇಕು. ಆರೋಗ್ಯ, ಹೆರಿಗೆ, ಪಿಂಚಣಿ ಸೇರಿದಂತೆ ಸಮಗ್ರ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಎಲ್ಲಾ ಕಾರ್ಮಿಕರಿಗೆ ವಿಸ್ತರಿಸಬೇಕು. ಮಹಿಳಾ ಕಾರ್ಮಿಕರಿಗೆ ಸುರಕ್ಷಿತ, ಗೌರವಯುತ ಹಾಗೂ ಕಿರುಕುಳಮುಕ್ತ ಕೆಲಸದ ವಾತಾವರಣವನ್ನು ಖಚಿತಪಡಿಸಬೇಕು.