ನಕಲಿ ಔಷಧ ಜಾಲ : ಜಂಟಿ ಪೊಲೀಸ್ ಆಯುಕ್ತ ಸಿ.ವಂಶಿಕೃಷ್ಣ ನೇತೃತ್ವದಲ್ಲಿ SIT ತಂಡ ರಚನೆ

Update: 2026-08-20 20:34 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ಬೆಂಗಳೂರು ದಕ್ಷಿಣ ಜಿಲ್ಲೆ(ರಾಮನಗರ) ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದ ನಕಲಿ ಔಷಧಿ ಜಾಲದ ಕುರಿತು ತನಿಖೆ ನಡೆಸಲು ಬೆಂಗಳೂರು ನಗರ ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಿ.ವಂಶಿಕೃಷ್ಣ ಅವರ ನೇತೃತ್ವದಲ್ಲಿ ‘ವಿಶೇಷ ತನಿಖಾ ತಂಡ’ (SIT)ವನ್ನು ರಚನೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಗುರುವಾರ ಒಳಾಡಳಿತ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಎಸ್.ಅಂಬಿಕಾ ಆದೇಶ ಹೊರಡಿಸಿದ್ದು, ತಂಡದ ಸದಸ್ಯರಾಗಿ ಹಿರಿಯ ಪೊಲೀಸ್ ಅಧಿಕಾರಿ ಶಿವಪ್ರಕಾಶ್, ಸಿಐಡಿಯ ಪೊಲೀಸ್ ಅಧೀಕ್ಷಕ ಲೋಕೇಶ್ ಬಿ.ಜಗಲಾಸರ್, ಸಹಾಯಕ ಔಷಧ ನಿಯಂತ್ರಕ ಮಂಜುನಾಥ ರೆಡ್ಡಿ, ಬೆಂಗಳೂರು ದಕ್ಷಿಣ ಜಿಲ್ಲೆ ಸಹಾಯಕ ಔಷಧ ನಿಯಂತ್ರಕರಾದ ನಮ್ರತಾ ಹಲ್ಲೂರು ಹಾಗೂ ಔಷಧ ನಿರೀಕ್ಷಕರಾದ ನೇಹಾ ಮುರ್ಗಿ ಅವರನ್ನು ನೇಮಕ ಮಾಡಲಾಗಿದೆ.

ಬೆಂಗಳೂರು ದಕ್ಷಿಣ ಜಿಲ್ಲೆ(ರಾಮನಗರ) ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದ ನಕಲಿ ಔಷಧಿ ಜಾಲ ಪ್ರಕರಣವೂ ಸೇರಿದಂತೆ ಇದರ ಸಂಬಂಧ ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಇತರೆ ಎಲ್ಲ ಕ್ರಿಮಿನಲ್ ಪ್ರಕರಣಗಳ ತನಿಖೆಯನ್ನು ಮೇಲ್ಕಂಡ ‘SIT’ ತಂಡಕ್ಕೆ ವರ್ಗಾಯಿಸಬೇಕು. ಅಲ್ಲದೆ, ಈ ತಂಡಕ್ಕೆ ಅಗತ್ಯ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಒದಗಿಸಬೇಕು ಎಂದು ಸೂಚಿಸಲಾಗಿದೆ.

ವಿಶೇಷ ತನಿಖಾ ತಂಡವು ಮೇಲ್ಕಂಡ ಪ್ರಕರಣಗಳ ಸಂಬಂಧ ಸಮಗ್ರ ತನಿಖೆ ನಡೆಸಿ, ತನಿಖಾ ವರದಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅಲ್ಲದೆ, ಆ ಪ್ರತಿಯನ್ನು ರಾಜ್ಯ ಪೊಲೀಸ್ ಮಹಾ ನಿದೇಶಕರು ಹಾಗೂ ಪೊಲೀಸ್ ಮಹಾ ನಿರೀಕ್ಷಕರು ಇವರ ಮೂಲಕ ರಾಜ್ಯ ಸರಕಾರಕ್ಕೆ ಸಲ್ಲಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ರಾಜ್ಯದಲ್ಲಿನ ನಕಲಿ ಔಷಧಿ ಜಾಲ ಪತ್ತೆ ಬಹಳ ಗಂಭೀರ ವಿಷಯ. ಅಂತರರಾಜ್ಯ ಮಟ್ಟದಲ್ಲಿ ಈ ಜಾಲ ಇದೆ. ನಮ್ಮ ರಾಜ್ಯದಲ್ಲಿ ಬೇರೆ ಎಲ್ಲೆಲ್ಲಿದೆ ಎಂಬುದನ್ನು ಕಂಡುಹಿಡಿಯಬೇಕು. ಆ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವರಿಗೆ ಹಾಗೂ ಸಂಬಂಧಪಟ್ಟ ರಾಜ್ಯಗಳ ಸಚಿವರಿಗೂ ಪತ್ರ ಬರೆದಿದ್ದೇನೆ. ಎಲ್ಲ ಕಾರ್ಖಾನೆಗಳನ್ನು ಪರಿಶೀಲನೆ ನಡೆಸಬೇಕು. ವಿಶೇಷ ತನಿಖಾ ತಂಡವೂ ಈ ಕುರಿತು ಸಮಗ್ರ ತನಿಖೆ ನಡೆಸಬೇಕು’

-ಯು.ಟಿ.ಖಾದರ್ ಆರೋಗ್ಯ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News