ಮುಂಭಡ್ತಿಗೆ ತಡೆ ಆರೋಪ : ರಾಜ್ಯಪಾಲರಿಗೆ ದೂರು ಸಲ್ಲಿಸಿದ ಅರಣ್ಯಾಧಿಕಾರಿ
ಥಾವರ್ ಚಂದ್ ಗೆಹ್ಲೋಟ್
ಬೆಂಗಳೂರು, ಜ.12: ಹದಿನಾಲ್ಕು ವರ್ಷ ಸೇವಾವಧಿ ಪೂರ್ಣಗೊಳಿಸಿದ್ದರೂ ಉದ್ದೇಶ ಪೂರಕವಾಗಿ ಮುಂಭಡ್ತಿ ತಡೆಹಿಡಿಯಲಾಗುತ್ತಿದೆ ಎಂದು ಆರೋಪಿಸಿ ಮಹಿಳಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯೊಬ್ಬರು ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಯವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ದೊರೆ ಸಾನಿಪಾಳ್ಯದ ಅರಣ್ಯ ಇಲಾಖೆ ಸಂಶೋಧನಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸಿಎಫ್ ಎಚ್. ಸೀಮಾ, ಸೇವಾ ನಿಯಮಗಳ ಅನ್ವಯ ಮುಂಭಡ್ತಿಗೆ ಅರ್ಹರಿದ್ದರೂ ವಿನಾಕಾರಣ ತಡೆಹಿಡಿಯಲಾಗಿದೆ ಎಂದು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.
2011-13ನೇ ಸಾಲಿನಲ್ಲಿ ನೇರ ನೇಮಕಾತಿ ಮೂಲಕ ಎಸಿಎಫ್ ಆಗಿ ಇಲಾಖೆಗೆ ಸೇರಿದ್ದೆ. ಐದು ವರ್ಷ ಸೇವೆ ಸಲ್ಲಿಸಿದ ಬಳಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆ ಮುಂಭಡ್ತಿ ನೀಡಬೇಕು ಎಂಬ ನಿಯಮವನ್ನು ಉಲ್ಲಂಘಿಸಲಾಗಿದೆ. ಯಾವುದೇ ಪ್ರಕರಣದಲ್ಲಿ ಇಲಾಖಾ ವಿಚಾರಣೆ ಬಾಕಿ ಇಲ್ಲದಿದ್ದರೂ ಉದ್ದೇಶ ಪೂರ್ವಕವಾಗಿಯೇ ನನ್ನ ಮುಂಭಡ್ತಿ ತಡೆ ಹಿಡಿಯಲಾಗಿದೆ. ನನಗಿಂತ ಸೇವಾಕಿರಿತನ ಹೊಂದಿದವರಿಗೆ ಮುಂಭಡ್ತಿ ನೀಡಿ ಅನ್ಯಾಯ ಮಾಡಲಾಗಿದೆ ಎಂದು ಎಸಿಎಫ್ ಎಚ್.ಸೀಮಾ ಆರೋಪಿಸಿದ್ದಾರೆ.
2022ರಲ್ಲಿ ಕರ್ನಾಟಕ ಆಡಳಿತಾತ್ಮಕ ಮಂಡಳಿಯು ‘ಸೀಲ್ಡ್ ಕವರ್’ ತೆಗೆದು ಮುಂಭಡ್ತಿ ನೀಡುವಂತೆ ನಿರ್ದೇಶನ ನೀಡಿದೆ. ಜತೆಗೆ, ವಾರ್ಷಿಕ ಕಾರ್ಯ ನಿರ್ವಹಣಾ ವರದಿಯೂ ಲಭ್ಯವಿದೆ. ಇಷ್ಟಾದರೂ ಮುಂಭಡ್ತಿ ನೀಡದೆ ವಂಚಿಸಲಾಗುತ್ತಿದೆ. ಅದರಲ್ಲೂ, ನನ್ನ ಮುಂಭಡ್ತಿ ಕಡತಗಳನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸದೆ ಅರಣ್ಯ ಇಲಾಖೆ ಅಧೀನ ಕಾರ್ಯದರ್ಶಿ ಗೀತಾ ಎಂ. ಪಾಟೀಲ, ಇವರ ಹಿರಿಯ ಸಹಾಯಕಿ ಪ್ರೇಮಾ ವಿಳಂಬ ಮಾಡುತ್ತಿದ್ದಾರೆ ಎಂದು ಎಸಿಎಫ್ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.