ಆನೇಕಲ್: ಆಯಿಲ್ ಕಂಪೆನಿಯಲ್ಲಿ ಬೆಂಕಿ ಅವಘಡ; ಅಪಾರ ನಷ್ಟ
ಆನೇಕಲ್, ಸೆ.7: ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವೇಸ್ಟ್ ರೀಸೈಕಲ್ ಇಂಜಿನ್ ಆಯಿಲ್ ಕಂಪೆನಿಯೊಂದರಲ್ಲಿ ರವಿವಾರ ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದೆ.
ಸೂರ್ಯನಗರ-ರಾಮಸಾಗರ ಮುಖ್ಯರಸ್ತೆಯ ಹೀಲಲಿಗೆ ಗೇಟ್ ಮುಂದಿನ ವಿಶಾಲ್ ಟರ್ಬೋಟೆಕ್ ಕಂಪೆನಿ ಇದಾಗಿದ್ದು, ಕೈ ಒರೆಸುವ ವೇಸ್ಟ್ ಗೆ ತಗುಲಿದ ಬೆಂಕಿ ಬಳಿಕ ಇಡೀ ಕಾರ್ಖಾನೆಗೆ ವ್ಯಾಪಿಸಿದೆ ಎಂದು ತಿಳಿದುಬಂದಿದೆ.
ಬಳಸಿದ ಇಂಜಿನ್ ಆಯಿಲ್ ನ್ನು ಮತ್ತೆ ಶುದ್ಧೀಕರಿಸಿ ಮರುಬಳಕೆ ಮಾಡುವ ಕಂಪೆನಿ ಇದಾಗಿದೆ.
ಬೆಂಕಿ ಅವಘಡದಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಬೆಳಗ್ಗೆಯಾದ್ದರಿಂದ ಕಾರ್ಮಿಕರು ಇನ್ನಷ್ಟೇ ಆಗಮಿಸಬೇಕಾಗಿದ್ದರಿಂದ ಭಾರೀ ಅನಾಹುತ ತಪ್ಪಿದೆ ಎಂದು ಸೂರ್ಯನಗರ ಪೊಲೀಸರು ತಿಳಿಸಿದ್ದಾರೆ.
ಇಲೆಕ್ಟ್ರಾನಿಕ್ ಸಿಟಿ ಹಾಗು ಆನೇಕಲ್ ಅಗ್ನಿಶಾಮಕದಳದ ಮೂರು ವಾಹನಗಳು ಬೆಂಕಿ ನಂದಿಸುವಲ್ಲಿ ಹರಸಾಹಸ ಪಟ್ಟಿವೆ. ಶೇಕಡ 75 ಭಾಗ ಕಂಪೆನಿ ಸುಟ್ಟಿದ್ದು ಪೊಲೀಸರು, ಸಾರ್ವಜನಿಕರು ಹಾಗು ಅಗ್ನಿಶಾಮಕ ದಳದ ಸಹಕಾರದಿಂದ ಬೆಂಕಿ ತಹಬಂದಿಗೆ ಬಂದಿದೆ ಎಂದು ತಿಳಿದುಬಂದಿದೆ.