×
Ad

'KPSCಯ ಮತ್ತೊಂದು ಮಹಾಲೋಪ ಬಯಲು': ಸರಕಾರದ ವಿರುದ್ಧ ವಿಜಯೇಂದ್ರ ಆಕ್ರೋಶ

Update: 2025-05-06 12:57 IST

ಬಿ.ವೈ.ವಿಜಯೇಂದ್ರ

ಬೆಂಗಳೂರು: ''ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕಿದ್ದ KPSCಯು ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಲೋಪದೋಷಗಳು ಹಾಗೂ ಅವ್ಯವಸ್ಥೆಯ ಭ್ರಷ್ಟಕೂಪವಾಗಿ ಮಾರ್ಪಟ್ಟಿರುವುದು ಬಯಲಾಗಿದೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಈ ಸಂಬಂಧ ಪೋಸ್ಟ್ ಮಾಡಿರುವ ಅವರು, ''KPSC ಪೂರ್ವಭಾವಿ ಪರೀಕ್ಷೆ, ಮರುಪರೀಕ್ಷೆ, ಮುಖ್ಯ ಪರೀಕ್ಷೆ, ಈ ಮೂರು ಪರೀಕ್ಷೆಗಳಲ್ಲೂ ಆಗಿರುವ ಭಾಷಾಂತರ ಲೋಪದಿಂದ ಈಗಾಗಲೇ ಲಕ್ಷಾಂತರ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಅನ್ಯಾಯಕ್ಕೊಳಗಾಗಿದ್ದಾರೆ. ಇದೀಗ ಮತ್ತೊಂದು ಪ್ರಮಾದವೆಸಗಿ ಉದ್ಯೋಗಾಕಾಂಕ್ಷಿಗಳ ಭವಿಷ್ಯದ ಜತೆ ಚೆಲ್ಲಾಟವಾಡಿ ಸಾರ್ವಜನಿಕ ವಲಯದಲ್ಲೂ ಆಕ್ರೋಶಕ್ಕೆ ಗುರಿಯಾಗಿದೆ'' ಎಂದು ಹೇಳಿದ್ದಾರೆ.

''ಸೋಮವಾರ ನಡೆದ ಪರೀಕ್ಷೆಯಲ್ಲಿ ಬೆಂಗಳೂರಿನ ಕೇಂದ್ರವೊಂದರಲ್ಲಿ ಸೀಲ್ ತೆರೆದಿದ್ದ ಪ್ರಶ್ನೆಪತ್ರಿಕೆಯ ಬಂಡಲ್ ಪತ್ತೆಯಾಗಿದ್ದು, ಇದನ್ನು ಪರೀಕ್ಷಾ ಕೊಠಡಿ ಮೇಲ್ವಿಚಾರಕರೂ ಸಹ ಒಪ್ಪಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಅನುಮಾನ ಹುಟ್ಟುಹಾಕಿದೆ'' ಎಂದು ಹೇಳಿದ್ದಾರೆ.

''ಕರ್ನಾಟಕ ಲೋಕಸೇವಾ ಆಯೋಗವು ಪದೇ ಪದೇ ಎಡವಟ್ಟುಗಳು, ಗೊಂದಲಗಳನ್ನು ಸೃಷ್ಟಿಸಿ ದೇಶದೆದುರು ಕರ್ನಾಟಕದ ಘನತೆ ಕುಗ್ಗಿಸುವ ಕೆಲಸ ಮಾಡುತ್ತಿದ್ದರೂ ಕಾಂಗ್ರೆಸ್ ಸರಕಾರ ಕಣ್ಣುಮುಚ್ಚಿ ಕುಳಿತಿರುವುದು ದುರಂತದ ದೌರ್ಭಾಗ್ಯವೇ ಸರಿ. ಈ ಕೂಡಲೇ ಪರೀಕ್ಷಾ ಕೊಠಡಿಗೆ ಪ್ರಶ್ನೆಪತ್ರಿಕೆಗಳು ಬರುವ ಮುನ್ನವೇ ಬಂಡಲ್ ತೆರೆದಿರುವ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ, ಕೆಪಿಎಸ್ಸಿ ಪರೀಕ್ಷಾ ಅಭ್ಯರ್ಥಿಗಳಿಗಾಗುತ್ತಿರುವ ಬಹುದೊಡ್ಡ ಅನ್ಯಾಯ, ದ್ರೋಹಗಳನ್ನು ಸರಿಪಡಿಸದಿದ್ದರೆ ಲಕ್ಷಾಂತರ ವಿದ್ಯಾರ್ಥಿಗಳ ಆಕ್ರೋಶಕ್ಕೆ ರಾಜ್ಯ ಸರ್ಕಾರ ಬೆಲೆ ತೆರಬೇಕಾದೀತು'' ಎಂದು ಅವರು ಎಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News