×
Ad

ಬಿಜೆಪಿ ನಾಯಕರಿಗೆ ಮಹಾರಾಷ್ಟ್ರ ಸರಕಾರದ ತೀರ್ಮಾನದ ಅರಿವಿದೆಯೇ? : ಪ್ರಿಯಾಂಕ್ ಖರ್ಗೆ ತಿರುಗೇಟು

Update: 2025-03-11 20:08 IST

ಪ್ರಿಯಾಂಕ್ ಖರ್ಗೆ

ಬೆಂಗಳೂರು : ‘ಗ್ಯಾರಂಟಿ ಅನುಷ್ಠಾನ ಸಮಿತಿಗಳ ನೇಮಕಾತಿಗಳ ಬಗ್ಗೆ ಭಯಂಕರ ಅಸಮಾಧಾನಗೊಂಡಿರುವ ರಾಜ್ಯ ಬಿಜೆಪಿ ನಾಯಕರಿಗೆ ಮಹಾರಾಷ್ಟ್ರದ ಬಿಜೆಪಿ ಸರಕಾರದ ತೀರ್ಮಾನದ ಬಗ್ಗೆ ಅರಿವಿದೆಯೇ?’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಮಂಗಳವಾರ ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಮಹಾರಾಷ್ಟ್ರದ ಬಿಜೆಪಿ ಸರಕಾರ ಮತ್ತು ಕೇಂದ್ರ ಸರಕಾರ ಆರೆಸ್ಸೆಸ್ ಕಾರ್ಯಕರ್ತರನ್ನು ಮಹಾರಾಷ್ಟ್ರ ಸರಕಾರದ ಪ್ರತಿ ಸಚಿವರಿಗೆ ಆಪ್ತ ಸಹಾಯಕ(ಪಿಎ) ಹಾಗೂ ಇತರ ಅಧಿಕಾರಿಗಳಾಗಿ ನೇಮಿಸಿದ್ದರ ಬಗ್ಗೆ ಕರ್ನಾಟಕದ ಬಿಜೆಪಿ ನಾಯಕರು ಮಹಾಮೌನ ವ್ರತ ಆಚರಿಸುತ್ತಿರುವುದೇಕೆ? ಎಂದು ಅವರು ಕೇಳಿದ್ದಾರೆ.

ಮಹಾರಾಷ್ಟ್ರ ಸರಕಾರದ ಈ ನಡೆ ಬಗ್ಗೆ ಇಲ್ಲಿನ ಬಿಜೆಪಿ ನಾಯಕರಿಗೆ ಸಹಮತ ಇದೆಯೇ? ಮಂತ್ರಿಗಳ ಕಚೇರಿಯಲ್ಲಿ ಸರಕಾರೇತರ ನೌಕರರ ನೇಮಕಾತಿಗೆ ಸಂಬಂಧಿಸಿದ ನಿಯಮಗಳನ್ನು ಮಹಾರಾಷ್ಟ್ರ ಸರಕಾರವು ತಿದ್ದುಪಡಿ ಮಾಡಿ, ಅಂತಹ ನೇಮಕಾತಿಗಳ ಸಂಖ್ಯೆಯನ್ನು ಎರಡರಿಂದ ನಾಲ್ಕಕ್ಕೆ ಹೆಚ್ಚಿಸಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ನೇಮಕಾತಿಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರನ್ನೇ ತುಂಬಲಾಗಿದೆ. ಇದು ‘ಸರಕಾರ ಮತ್ತು ಪಕ್ಷದ ನಡುವಿನ ಸಮನ್ವಯ‘ಕ್ಕಾಗಿ ಅಲ್ಲವೇ ರಾಜ್ಯ ಬಿಜೆಪಿ? ಎಂದು ಪ್ರಶ್ನಿಸಿರುವ ಅವರು, ರಾಜ್ಯದ ಬಿಜೆಪಿ ನಾಯಕರಿಗೆ ತಮ್ಮವರು ಮಾಡಿದರೆ ‘ಸಂತಸ’ ಬೇರೆಯವರು ಮಾಡಿದರೆ ‘ಸಂಕಟ’! ಏಕೆ ಹೀಗೆ? ತಿರುಗೇಟು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News