×
Ad

ಬೆಂಗಳೂರು | ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್ ಮಾಡಿಸುವುದಾಗಿ ನಂಬಿಸಿ ಹಣಗಳಿಸುತ್ತಿದ್ದ ರೈಲ್ವೆ ಇಲಾಖೆ ಅಧಿಕಾರಿ ಬಂಧನ

Update: 2024-12-30 23:36 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗಾಗಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳನ್ನು ಪಾಸ್ ಮಾಡಿಸುವುದಾಗಿ ನಂಬಿಸಿ ಹಣ ಗಳಿಸುತ್ತಿದ್ದ ರೈಲ್ವೇ ಇಲಾಖೆಯ ಅಧಿಕಾರಿಯನ್ನು ಇಲ್ಲಿನ ವಿಜಯನಗರ ಠಾಣೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಮೆಜೆಸ್ಟಿಕ್‍ನಲ್ಲಿರುವ ಸೌತ್ ವೆಸ್ಟರ್ನ್ ರೈಲ್ವೆಯಲ್ಲಿ ಚೀಫ್ ಟಿಕೆಟ್ ಇನ್‍ಸ್ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಗೋವಿಂದರಾಜು(49) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಮಧ್ಯವರ್ತಿಗಳ ಸಹಾಯದಿಂದ ಇತ್ತೀಚೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆ ಬರೆದ ಕೆಲ ಅಭ್ಯರ್ಥಿಗಳನ್ನು ಸಂಪರ್ಕಿಸಿದ್ದ ಆರೋಪಿ, ‘ತನಗೆ ಪರೀಕ್ಷೆಗೆ ಸಂಬಂಧಿಸಿದಂತಹ ಕೆಲ ಅಧಿಕಾರಿಗಳ ಪರಿಚಯವಿದ್ದು, ಪರೀಕ್ಷೆಯಲ್ಲಿ ಪಾಸ್ ಮಾಡಿಸಿ ಹುದ್ದೆ ಕೊಡಿಸುವುದಾಗಿ’ ನಂಬಿಸಿದ್ದ. ಅಭ್ಯರ್ಥಿಗಳಿಂದ ಪಿಡಿಒ ಹುದ್ದೆಗೆ 25 ಲಕ್ಷ ರೂ. ಹಾಗೂ ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆ ಪಾಸ್ ಮಾಡಿಸಲು 50 ಲಕ್ಷ ರೂಪಾಯಿಗೆ ಮಾತನಾಡಿಕೊಂಡಿದ್ದ ಎಂದು ಆರೋಪಿಸಲಾಗಿದೆ.

ಪರೀಕ್ಷೆಯಲ್ಲಿ ಉತ್ತರ ಗೊತ್ತಿಲ್ಲದ ಪ್ರಶ್ನೆಗಳನ್ನು ಖಾಲಿ ಬಿಟ್ಟು ಬರುವಂತೆ ತಿಳಿಸಿ, ನಂತರ ತಾನು ಸರಿಯಾದ ಉತ್ತರಗಳನ್ನು ತುಂಬಿಸಿ ಪಾಸ್ ಮಾಡಿಸುವುದಕ್ಕೆ ಗ್ಯಾರಂಟಿಯಾಗಿ ಅಭ್ಯರ್ಥಿಗಳ ಎಸೆಸ್ಸೆಲ್ಸಿ ಮತ್ತು ಪದವಿ ಪ್ರಮಾಣ ಪತ್ರ, ಪರೀಕ್ಷಾ ಪ್ರವೇಶ ಪತ್ರಗಳು, ಚೆಕ್‍ಗಳನ್ನು ಪಡೆದುಕೊಂಡಿದ್ದ ಎಂದು ಹೇಳಲಾಗಿದೆ.

ಡಿ.29.ರ ರವಿವಾರದಂದು ನಡೆದ ಕೆಎಎಸ್ ಪರೀಕ್ಷೆಯಲ್ಲಿ ಪಾಸ್ ಮಾಡಿಸುವುದಾಗಿ ಅಭ್ಯರ್ಥಿಯೊಬ್ಬರ ಕಡೆಯವರನ್ನು ಭೇಟಿಯಾಗಲು ವಿಜಯನಗರಕ್ಕೆ ಬಂದಿದ್ದಾಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯ ಮೊಬೈಲ್‍ನಲ್ಲಿ 46 ಜನ ಅಭ್ಯರ್ಥಿಗಳ ಹೆಸರು ಮತ್ತು ಅದರ ಮುಂದೆ ಚೆಕ್ ಮತ್ತು ಡಾಕ್ಯುಮೆಂಟ್ ಎಂದು ನಮೂದಿಸಿರುವ ಫೋಟೋಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದು, ಆ ಅಭ್ಯರ್ಥಿಗಳು ಯಾರು ಎಂಬುದರ ಕುರಿತು ಕೂಲಂಕಷವಾದ ತನಿಖೆ ನಡೆಸಲಾಗುತ್ತಿದೆ. ಆರೋಪಿಯು ಅಭ್ಯರ್ಥಿಗಳಿಂದ ಪಡೆದ ಕೆಲವು ದಾಖಲಾತಿ ಮತ್ತು ಚೆಕ್‍ಗಳನ್ನು ಮಧ್ಯವರ್ತಿಗಳಿಗೆ ನೀಡಿರುವುದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಅಭ್ಯರ್ಥಿಗಳಿಗೆ ವಂಚಿಸುತ್ತಿದ್ದವರ ವಿರುದ್ಧ ಕಾರ್ಯಾಚರಣೆ ಮಾಡಿದಾಗ ಗೋವಿಂದರಾಜು ಎಂಬಾತನನ್ನು ಬಂಧಿಸಲಾಗಿದೆ. ಪರೀಕ್ಷೆಗಳಲ್ಲಿ ಪಾಸ್ ಮಾಡಿಸುವುದಾಗಿ ಭರವಸೆ ನೀಡುತ್ತಿದ್ದ ಆರೋಪಿ, ಅದಕ್ಕಾಗಿ ಅಭ್ಯರ್ಥಿಗಳಿಂದ ಹಾಲ್ ಟಿಕೆಟ್, ಚೆಕ್‍ಗಳನ್ನು ಪಡೆದುಕೊಳ್ಳುತ್ತಿದ್ದ. ಆತನೊಂದಿಗೆ ರಾಜ್ಯದ ಬೇರೆ ಬೇರೆ ಭಾಗದವರು ಸಂಪರ್ಕದಲ್ಲಿರುವುದು ತಿಳಿದು ಬಂದಿದೆ. ಆತ ಹೇಳಿದಂತೆ ಯಾರಿಗೂ ಪಾಸ್ ಮಾಡಿಸಿ ಕೊಟ್ಟಿಲ್ಲ, ಆದರೆ ಪಾಸ್ ಮಾಡಿಸುವುದಾಗಿ ಚೆಕ್‍ಗಳನ್ನು ಪಡೆಯುತ್ತಿದ್ದ. ಪ್ರಕರಣಕ್ಕೆ ಸಂಬಂಧಪಟ್ಟವರಿಗೆ ನೊಟೀಸ್ ನೀಡಿ ವಿಚಾರಣೆ ನಡೆಸುತ್ತೇವೆ. ಆರೋಪಿ ಮತ್ತು ಪರೀಕ್ಷಾ ಪ್ರಾಧಿಕಾರಕ್ಕೆ ಯಾವುದೇ ಸಂಪರ್ಕವಿಲ್ಲ.

-ಎಸ್.ಗಿರೀಶ್, ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News