×
Ad

ಬೆಂಗಳೂರು | ಅನಧಿಕೃತ ರಾಪಿಡೋ, ಓಲಾ, ಊಬರ್, ಗೂಡ್ಸ್ ಪೋರ್ಟಲ್‍ಗಳ ವಿರುದ್ಧ ಪ್ರತಿಭಟನೆ

Update: 2025-01-25 20:30 IST

ಬೆಂಗಳೂರು: ಅನಧಿಕೃತವಾಗಿ ನಡೆಸಲಾಗುತ್ತಿರುವ ರಾಪಿಡೋ, ಓಲಾ, ಊಬರ್ ಹಾಗೂ ಗೂಡ್ಸ್ ಪೋರ್ಟಲ್‍ನಂತಹ ಆನ್‍ಲೈನ್ ಸಂಸ್ಥೆಗಳು ವಿರುದ್ಧ ಹಾಗೂ ಇಂತಹ ಕಾನೂನುಬಾಹಿರ ಸಂಸ್ಥೆಗಳನ್ನು ಪೋಷಿಸುತ್ತಿರುವ ಸಾರಿಗೆ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಹಾಗೂ ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಲಾಯಿತು.

ಚಾಲಕರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಚಾಲಕರು ಖಾಲಿ ಪಾತ್ರೆ ಸಾಮಾನುಗಳನ್ನು ಬಡಿದು, ಕಪ್ಪು ಪಟ್ಟಿ ಧರಿಸಿ ಅನಧಿಕೃತ ಗೂಡ್ಸ್ ಪೋರ್ಟಲ್ ವಿರುದ್ಧ ಘೋಷಣೆ ಕೂಗಿದರು. ಕಾನೂನು ಬಾಹಿರ ಸಾಗಾಣೆ ವಾಹನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಇವು ಸರಕಾರದಿಂದ ನಿಯಮಾನುಸಾರ ಅನುಮತಿ ಪಡೆದಿಲ್ಲ. ಇದರಿಂದ ಖಾಸಗಿ ವಾಹನ ಚಾಲಕರಿಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮಾತನಾಡಿ, ‘ಸಮಸ್ಯೆ ಬಗೆಹರಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಹಲವು ಬಾರಿ ಮಾಡಿದರೂ ಕೂಡ ಯಾವುದೇ ಸ್ಪಂದನೆ ದೊರೆತಿಲ್ಲ. ಸಾರಿಗೆ ಅಧಿಕಾರಿಗಳೇ ಇಂತಹ ಕಾನೂನು ಬಾಹಿರ ಸಂಸ್ಥೆಗಳ ಪೋಷಕರಾಗಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮನವಿ ಮಾಡಿದ್ದೇವೆ. ಸರಕಾರದ ಧೋರಣೆಯಿಂದ ಚಾಲಕರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ರಾಜ್ಯಾಧ್ಯಕ್ಷ ಸಂತೋಷ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಕನ್ನಡಿಗ ಮತ್ತಿತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News