×
Ad

ಬೆಂಗಳೂರು | ನಿರ್ದೇಶಕರ ಮೇಲೆ ಗುಂಡು ಹಾರಿಸಿ ಕೊಲೆ ಯತ್ನ ಪ್ರಕರಣ : ಕಿರುತೆರೆ ನಟ ಬಂಧನ

Update: 2024-11-19 20:59 IST

ನಟ ತಾಂಡವೇಶ್ವರ

ಬೆಂಗಳೂರು: ನಿರ್ದೇಶಕರ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಆರೋಪದಡಿ ಕಿರುತೆರೆ ನಟ ತಾಂಡವೇಶ್ವರನನ್ನು ಚಂದ್ರಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ

ಮೂಲತಃ ಹಾಸನದ ತಾಂಡವೇಶ್ವರ ಹಾಗೂ ಚಲನಚಿತ್ರ ನಿರ್ದೇಶಕ ಭರತ್ ನವುಂದ ಪರಿಚಯಸ್ಥನಾಗಿದ್ದು, ದೇವನಾಮ್ ಪ್ರಿಯ ಎಂಬ ಚಲನಚಿತ್ರ ನಿರ್ದೇಶಿಸುವ ವಿಚಾರವಾಗಿ ಮಾತುಕತೆ ನಡೆಸಿದ್ದರು.ಆ ಸಂದರ್ಭದಲ್ಲಿ ನಿರ್ಮಾಪಕರು ಸಿಗದೇ ಇದುದ್ದರಿಂದ ತಾಂಡವೇಶ್ವರ ಅವರೇ ಹಂತ-ಹಂತವಾಗಿ ನಿರ್ದೇಶಕ ಭರತ್‍ಗೆ ಒಟ್ಟು 6 ಲಕ್ಷ ಹಣವನ್ನು ನೀಡಿದ್ದಾರೆ ಎನ್ನಲಾಗಿದೆ.

ಚಿತ್ರ ನಿರ್ದೇಶನ ಪ್ರಾರಂಭವಾಗಿ ಎರಡು ವರ್ಷ ಕಳೆದರೂ ಸಹ ತ್ವರಿತ ಗತಿಯಲ್ಲಿ ಭರತ್ ಚಿತ್ರ ನಿರ್ದೇಶನವನ್ನು ಪೂರ್ಣಗೊಳಿಸಿರಲಿಲ್ಲ. ಹಾಗಾಗಿ ತಾವು ನೀಡಿರುವ ಹಣವನ್ನು ಹಿಂದಿರುಗಿಸುವಂತೆ ತಾಂಡವೇಶ್ವರ್ ಕೇಳಿದ್ದಾರೆ. ಈ ವಿಚಾರದ ಬಗ್ಗೆ ಚರ್ಚಿಸುವ ಸಲುವಾಗಿ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಬಸವೇಶ್ವರ ಬಡಾವಣೆಯಲ್ಲಿರುವ ನಿರ್ಮಾಪಕರ ಕಚೇರಿಯಲ್ಲಿ ನಿನ್ನೆ ಸಂಜೆ 6.30ರ ಸುಮಾರಿನಲ್ಲಿ ಸಭೆ ಸೇರಿದ್ದಾರೆ ಎನ್ನಲಾಗಿದೆ.

ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಆ ಸಂದರ್ಭದಲ್ಲಿ ತಾಂಡವೇಶ್ವರ್ ತಾವು ತಂದಿದ್ದ ಸಿಂಗಲ್ ಬ್ಯಾರಲ್ ಬಂದೂಕಿನಿಂದ ಭರತ್ ಮೇಲೆ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಆ ಗುಂಡು ಕಚೇರಿ ಕೊಠಡಿಯ ಆರ್ಸಿಸಿ ತಗುಲಿದ್ದರಿಂದ ಭರತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತನ್ನ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ತಾಂಡವೇಶ್ವರ್ ವಿರುದ್ಧ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ಭರತ್ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಕಿರುತೆರೆ ನಟ ತಾಂಡವೇಶ್ವರನನ್ನು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News