×
Ad

ಬೆಂಗಳೂರು | ಕ್ರಿಪ್ಟೊ ಕರೆನ್ಸಿ ವಂಚನೆ ಪ್ರಕರಣ : ಆರೋಪಿ ಬಂಧನ

Update: 2024-09-10 20:56 IST

ಸಾಂದರ್ಭಿಕ ಚಿತ್ರ

ಬೆಂಗಳೂರು: ಕ್ರಿಪ್ಟೊ ಕರೆನ್ಸಿ ಖಾತೆಯ ಪಾಸ್ ವರ್ಡ್ ಬದಲಾಯಿಸಿ ಕೋಟ್ಯಂತರ ರೂಪಾಯಿ ರೂ. ಹಣ ವಂಚಿಸಿದ್ದ ಪ್ರಕರಣದಡಿ ಕಂಪೆನಿಯ ನೌಕರನನ್ನು ಸಿಐಡಿ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಸೈಪರ್ ಟೆಕ್ನಾಲಜೀಸ್ ಪ್ರೈವೇಟ್ ಕಂಪೆನಿಯ ಮುಖ್ಯಕಾರ್ಯನಿರ್ವಾಹಣಾಧಿಕಾರಿ(ಸಿಇಒ) ಅಖಿಲ್ ಗುಪ್ತ ಎಂಬುವರು ನೀಡಿದ ದೂರಿನನ್ವಯ ಹರಿಯಾಣ ಮೂಲದ ಶುಭಾಂಗ್ ಜೈನ್(26) ಎಂಬವನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಂಚನೆಯ ಹಣವನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ: ಸುಬ್ರಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸೈಪರ್ ಟೆಕ್ನಾಲಜೀಸ್ ಕಂಪೆನಿಯಲ್ಲಿ ಕ್ರಿಪ್ಟೊ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಆರೋಪಿ ಶುಭಾಂಗ್ ಜೈನ್ ಕೆಲಸ ಮಾಡುತ್ತಿದ್ದ. ಕೆಲಸಕ್ಕೆ ಸೇರಿದ ಒಂದು ವರ್ಷದ ಬಳಿಕ ಕಂಪೆನಿಯ ಖಾತೆಯಲ್ಲಿದ್ದ ಕ್ರಿಪ್ಟೊ ಕರೆನ್ಸಿ ವಾಲೆಟ್ ಪಾಸ್‍ವರ್ಡ್ ಅನ್ನು ಮಾಲಕರ ಗಮನಕ್ಕೆ ತರದೇ ಬದಲಾಯಿಸಿದ್ದ. ಖಾತೆಯಲ್ಲಿದ್ದ ಸುಮಾರು 56 ಕೋಟಿ ರೂ. ಮೌಲ್ಯದ ಕ್ರಿಪ್ಟೊ ಕರೆನ್ಸಿ ವರ್ಗಾಯಿಸಿ ವಂಚಿಸಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಇನ್‍ಸ್ಪೆಕ್ಟರ್ ಶಿವಪ್ರಸಾದ್ ನೇತೃತ್ವದ ತಂಡವು ಆರೋಪಿಯನ್ನು ಮುಂಬೈನಲ್ಲಿ ಬಂಧಿಸಿದೆ ಎಂದು ತಿಳಿದು ಬಂದಿದೆ.

ಕೋಟ್ಯಂತರ ರೂ. ವಂಚನೆ ಸಂಬಂಧ ಆರೋಪಿ ಶುಭಾಂಗ್ ಜೈನ್‍ನ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಲಾಗಿದೆ. ಕ್ರಿಪ್ಟೊ ವಾಲೆಟ್‍ನಿಂದ ಯಾರಿಗೆ ಎಷ್ಟು ಹಣ ನೀಡಿದ್ದ ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ನೊಟೀಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News