×
Ad

ಬೆಂಗಳೂರು | ಸೈಬರ್ ವಂಚನೆ : ಐವರ ಬಂಧನ

Update: 2024-08-16 21:33 IST
ಸಾಂದರ್ಭಿಕ ಚಿತ್ರ

ಬೆಂಗಳೂರು : ನಗರದಲ್ಲಿ ಸೈಬರ್ ವಂಚನೆ ನಡೆಸಿದ್ದ ಐವರು ಆರೋಪಿಗಳನ್ನು ಸಿಐಡಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಬೆಂಗಳೂರಿನ ಮೊಹಮ್ಮದ್ ಶಾಖಬ್, ಮೊಹಮ್ಮದ್ ಆಯಾನ್, ಅಹ್ಸಾನ್ ಅನ್ಸಾರಿ, ಸೋಲೋಮನ್ ರಾಜ ಹಾಗೂ ದುಬೈ ಮೂಲದ ಯೂಸಫ್ ಸೇಠ್ ಎಂಬುವರು ಬಂಧಿತರು ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 1.7 ಕೋಟಿ ರೂ. ನಗದು, 7,700 ಯುಎಸ್ ಡಾಲರ್ ಹಾಗೂ ವಂಚನೆಯ ಹಣದಲ್ಲಿ ಖರೀದಿಸಿದ್ದ ಒಂದು ಬೆಂಜ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2024ರ ಮೇನಲ್ಲಿ ಕೊಡಗು ಮೂಲದ ವ್ಯಕ್ತಿಯೊಬ್ಬರ ಮೊಬೈಲ್‍ಗೆ ಕರೆ ಮಾಡಿದ್ದ ಆರೋಪಿಗಳು, ಫೆಡೆಕ್ಸ್ ಕಂಪೆನಿಯಿಂದ ಮಾತನಾಡುತ್ತಿರುವುದಾಗಿ ಹೇಳಿ, ‘ನಿಮಗೆ ಬಂದಿರುವ ಪಾರ್ಸೆಲ್‍ನಲ್ಲಿ ಎಂಡಿಎಂಎ ಮಾದಕ ಪದಾರ್ಥವಿದೆ. ಆದ್ದರಿಂದ ಆ ಪಾರ್ಸೆಲ್ ಸೀಝ್ ಆಗಿದ್ದು, ನೀವು ಕ್ರೈಂ ಪೊಲೀಸ್ ಅಧಿಕಾರಿಯವರೊಂದಿಗೆ ಮಾತನಾಡಬೇಕು’ ಎಂದಿದ್ದರು.

ಬಳಿಕ ಕ್ರೈಂ ಪೊಲೀಸರೆಂದು ವಾಟ್ಸ್ ಆ್ಯಪ್ ಕರೆ ಮೂಲಕ ಸಂಪರ್ಕಿಸಿ, ‘ನಿಮ್ಮ ಪಾರ್ಸೆಲ್‍ನಲ್ಲಿ ಎಂಡಿಎಂಎ ಮಾದಕ ವಸ್ತು ಇರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಇದನ್ನು ಇತ್ಯರ್ಥಪಡಿಸಿಕೊಳ್ಳಲು ನೀವು ಹಣ ನೀಡಬೇಕಾಗುತ್ತದೆ’ ಎಂದು ಬೆದರಿಸಿದ್ದರು. ಆತಂಕಗೊಂಡ ವ್ಯಕ್ತಿ ತನ್ನ ಬ್ಯಾಂಕ್ ಖಾತೆಯಿಂದ ಆರೋಪಿಗಳು ಹೇಳಿದ ಖಾತೆಗಳಿಗೆ ಒಟ್ಟು 2.21 ಕೋಟಿ ರೂ. ಹಣವನ್ನು ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿದ್ದರು. ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಕೆಲವು ದಿನಗಳ ಬಳಿಕ ಮತ್ತೆ ಕರೆ ಮಾಡಿ, ಇನ್ನಿತರೆ ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡಿ ಹಣ ವರ್ಗಾಯಿಸುವಂತೆ ಬೆದರಿಸಿದ್ದರು.

ಇದರಿಂದ ಸಂಶಯಗೊಂಡ ವ್ಯಕ್ತಿ, ಕೊಡಗಿನ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮುಂದಿನ ತನಿಖೆಗೆ ಪ್ರಕರಣವನ್ನು ಸಿಐಡಿ ಸೈಬರ್ ಕ್ರೈಂ ವಿಭಾಗಕ್ಕೆ ವರ್ಗಾಯಿಸಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಹಣ ವರ್ಗಾವಣೆಯಾದ ಖಾತೆಗಳ ವಿವರಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ತನಿಖಾ ಸಮಯದಲ್ಲಿ ಪ್ರಮುಖ ಆರೋಪಿಗಳು ಭಾರತೀಯ ಬ್ಯಾಂಕ್ ಖಾತೆಗಳನ್ನು ಬಳಸಿರುವುದು ಹಾಗೂ ವಂಚನೆಯ ಹಣ ಸುಮಾರು 26 ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿರುವುದು ಕಂಡುಬಂದಿದೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News