×
Ad

ಬೆಂಗಳೂರು | ಫಾರ್ಮ್ ಹೌಸ್‍ನಲ್ಲಿ ರೇವ್ ಪಾರ್ಟಿ ಪ್ರಕರಣ : ಮೂವರು ಪೊಲೀಸರ ಅಮಾನತು

Update: 2024-05-24 21:45 IST

ಬೆಂಗಳೂರು : ನಗರದ ಹೊರವಲಯದಲ್ಲಿರುವ ಜಿ.ಆರ್.ಫಾರ್ಮ್ ಹೌಸ್‍ನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಬ್ಬಗೋಡಿ ಪೊಲೀಸ್ ಠಾಣೆಯ ಎಎಸ್‍ಐ ನಾರಾಯಣಸ್ವಾಮಿ, ಬೀಟ್ ಪೊಲೀಸ್ ದೇವರಾಜ್ ಹಾಗೂ ಎಸ್‍ಐ ಗಿರೀಶ್ ಎಂಬುವರನ್ನು ಹೊಣೆ ಮಾಡಿ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಘಟನೆ ಕುರಿತಾಗಿ ಈ ಮೊದಲು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪ್ರಕರಣ ದಾಖಲಾಗಿದ್ದು, ಅನಂತರ ರೇವ್ ಪಾರ್ಟಿ ಹೆಬ್ಬಗೋಡಿ ಠಾಣಾ ವ್ಯಾಪ್ತಿ ಎಂದು ತಿಳಿಯುತ್ತಿದ್ದಂತೆ ಪ್ರಕರಣ ಹೆಬ್ಬಗೋಡಿಗೆ ವರ್ಗಾಯಿಸಲಾಗಿತ್ತು.

ಅನಂತರ ಸಿಸಿಬಿ ತನಿಖೆ ಬೆಂಗಳೂರು ಗ್ರಾಮಾಂತರ ಎಸ್‍ಪಿ ನೇತೃತ್ವದ ಸಹಕಾರದಲ್ಲಿ ನಡೆದಿದ್ದು, ಡಿಜಿ ಆದೇಶದಂತೆ ಮತ್ತೆ ಸಿಸಿಬಿಗೆ ಹೆಬ್ಬಗೋಡಿ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಿ ವರ್ಗಾಯಿಸಿತ್ತು. ಈ ನಡುವೆ ವಾರದಿಂದ ರಜೆಯಲ್ಲಿದ್ದ ಎಸ್ಪಿ ಕರ್ತವ್ಯ ನಿರ್ವಹಿಸುತ್ತಿದ್ದ ಎಚ್.ಸಿ.ಗಿರೀಶ್ ಮೇಲೆಯೂ ಹೊಣೆ ಹೊರಿಸಿ ಅಮಾನತು ಮಾಡಲಾಗಿದೆ.

ಅಲ್ಲದೇ ಠಾಣೆಯ ನಾರಾಯಣಸ್ವಾಮಿ ಹಾಗೂ ಬೀಟ್ ಪೊಲೀಸ್ ದೇವರಾಜ್‍ರನ್ನು ಹೊಣೆಗಾರರನ್ನಾಗಿಸಿ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣದ ಹಿನ್ನೆಲೆ: ನಗರದ ಹೊರವಲಯದಲ್ಲಿರುವ ಜಿ.ಆರ್.ಫಾರ್ಮ್ ಹೌಸ್‍ನಲ್ಲಿ ಬರ್ತ್‍ಡೇ ಪಾರ್ಟಿ ಹೆಸರಲ್ಲಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದು ಮೇ 20ರ ಸೋಮವಾರ ಬೆಳಗಿನ ಜಾವ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಪ್ರಕರಣದಲ್ಲಿ ಐವರನ್ನು ಬಂಧಿಸಿದ್ದರು. ಪಾರ್ಟಿಯಲ್ಲಿ ಮಾದಕ ವಸ್ತು ಪತ್ತೆಯಾಗಿತ್ತು. ಈ ಸಂಬಂಧ ಪಾರ್ಟಿಯಲ್ಲಿ ಭಾಗವಹಿಸಿದ್ದ 101 ಮಂದಿಯ ರಕ್ತ ಪರೀಕ್ಷೆಯ ವರದಿಯಲ್ಲಿ ಮಾದಕ ಸೇವನೆ ಮಾಡಿರುವ ಬಗ್ಗೆ ಖಚಿತವಾಗಿತ್ತು.

ಸದ್ಯ ವಾಸು, ಅರುಣ್ ಕುಮಾರ್, ನಾಗಬಾಬ, ಗೋಪಾಲ್ ರೆಡ್ಡಿ ಸೇರಿ ಆರು ಮಂದಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು ತೀವ್ರ ವಿಚಾರಣೆಯಲ್ಲಿ ತೊಡಗಿರುವುದಾಗಿ ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News