×
Ad

ಬೆಂಗಳೂರು | 'ಪೊಲೀಸ್ ಅಧಿಕಾರಿ ಮುಸ್ಲಿಮ್‌' ಎಂದು ನಿಂದಿಸಿದ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರ; ವೀಡಿಯೊ ವೈರಲ್

Update: 2023-10-27 22:59 IST

ಬೆಂಗಳೂರು, ಅ.27: ಮದ್ಯದ ಅಮಲಿನಲ್ಲಿ ಅಸಭ್ಯ ವರ್ತನೆ ಪ್ರದರ್ಶಿಸಿ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರ ಆ್ಯಡಂ ಬಿದ್ದಪ್ಪ ಎಂಬುವರ ವಿರುದ್ಧ ಇಲ್ಲಿನ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ನಡುವೆ ಆರೋಪಿಯು ಪೊಲೀಸ್‌ ಅಧಿಕಾರಿಯೊಬ್ಬರಿಗೆ ನಿಂದಿಸಿರುವ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಘಟನೆ ವವರ: ಅ.25ರ ರಾತ್ರಿ ಯಲಹಂಕದ ರೈಲ್ ವೀಲ್ ಫ್ಯಾಕ್ಟರಿ ಬಳಿ ಆ್ಯಡಂ ಬಿದ್ದಪ್ಪ ಅವರು ಅಪಾಯಕಾರಿಯಾಗಿ ಕಾರು ಚಲಾಯಿಸಿಕೊಂಡು ಬಂದು ರಾಹುಲ್ ಎಂಬಾತನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರ ಜತೆಗೂ ಕೂಡ ಬಿದ್ದಪ್ಪ ವಾಗ್ವಾದ ನಡೆಸಿದ್ದಾನೆ.

ಈ ಬಗ್ಗೆ ರಾಹುಲ್ ಯಲಹಂಕ ಪೊಲೀಸರಿಗೆ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದ್ದು, ಆರೋಪಿ ಆ್ಯಡಂ ಬಿದ್ದಪ್ಪನ ಕಾರನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿ ಬಳಿಕ ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವೀಡಿಯೊ ವೈರಲ್‌ 

ಪೊಲೀಸರ ಜತೆ ವಾಗ್ವಾದ ನಡೆಸುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯೊಬ್ಬರು ಕಾರು ಚಲಾಯಿಸುತ್ತಿದ್ದ ಆರೋಪಿ ಬಳಿಗೆ ಬಂದು ಪ್ರಶ್ನಿಸಿದಾಗ, ಆರೋಪಿ ಆ್ಯಡಂ ಬಿದ್ದಪ್ಪ ಅಧಿಕಾರಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ. ಈ ವೇಳೆ ಆರೋಪಿಯು, ‘ಘೌಸ್, ಘೌಸ್ ಪಾಷಾ, ಒಬ್ಬ ಮುಸ್ಲಿಮ್’ ಎನ್ನುತ್ತಾ ಪೋಲೀಸರ ಮೇಲೆ ಉಗುಳುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಆಲ್ಟ್‌ ನ್ಯೂಸ್‌ ನ ಸಹ ಸಂಸ್ಥಾಪಕ ಮುಹಮ್ಮದ್ ಝುಬೇರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಹಲವರು ಚಾಲಕ ಆ್ಯಡಂ ಬಿದ್ದಪ್ಪನ ವರ್ತನೆಯನ್ನು ಖಂಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News