ಬೆಂಗಳೂರು | ಯುವತಿ ಅನುಮಾನಸ್ಪದ ಸಾವು, ಮರ್ಯಾದಾ ಹತ್ಯೆ ಶಂಕೆ
ಬೆಂಗಳೂರು : ಇಲ್ಲಿನ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಸ್ಕೂರು ಕೆರೆಯಲ್ಲಿ ಯುವತಿಯೊಬ್ಬಕೆ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು, ಮರ್ಯಾದಾ ಹತ್ಯೆ ಜರುಗಿದೆ ಎಂದು ಆಕೆಯ ಪ್ರಿಯಕರ ಆರೋಪಿಸಿದ್ದಾನೆ.
ಸಹನಾ (21) ಎಂಬಾಕೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ತಂದೆ, ಮಗಳು ಬೈಕ್‍ನಲ್ಲಿ ಸಾಗುತ್ತಿದ್ದ ವೇಳೆ ಕೆರೆಗೆ ಬೈಕ್ ಬಿದ್ದಿದೆ. ಈಜಿ ದಡ ಸೇರಿದ ತಂದೆ ರಾಮಮೂರ್ತಿ ಠಾಣೆಗೆ ಹಾಜರಾಗಿದ್ದಾರೆ. ಆದರೆ ಮಗಳು ಸಹನಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಮಗಳನ್ನು ರಕ್ಷಣೆ ಮಾಡದೇ ನೇರವಾಗಿ ಠಾಣೆಗೆ ರಾಮಮೂರ್ತಿ ಬಂದಿದ್ದಾರೆ.ಇದರ ಹಿಂದೆ ಮರ್ಯಾದಾ ಹತ್ಯೆ ಸಂಚು ನಡೆದಿದೆ ಎಂದು ಪ್ರಿಯಕರ ನಿತಿನ್ ಮರ್ಯಾದಾ ಹತ್ಯೆ ಆರೋಪ ಮಾಡಿದ್ದಾರೆ.
ಹಲವು ದಿನಗಳಿಂದ ನಿತಿನ್, ಸಹನಾ ಪರಸ್ಪರ ಪ್ರೀತಿಸುತ್ತಿದ್ದರು. ಎರಡು ದಿನದ ಹಿಂದೆ ಯುವತಿ ಪೋಷಕರಿಗೆ ಪ್ರೀತಿಯ ವಿಚಾರ ಗೊತ್ತಾಗಿದೆ. ಅಂದು ರಾತ್ರಿ ಪ್ರಿಯಕರ ನಿತಿನ್‍ಗೆ ಕರೆ ಮಾಡಿದ್ದ ಸಹನಾ ತಂದೆ, ಬೆಳಗ್ಗೆ ಮಾತುಕತೆಗೆ ಬರುವಂತೆ ತಿಳಿಸಿದ್ದಾರೆ. ಸಹನಾ ತಂದೆ ಸ್ನೇಹಿತನ ಮನೆಯಲ್ಲಿ ನ್ಯಾಯ ಪಂಚಾಯಿತಿ ನಡೆದಿದೆ. ಈ ವೇಳೆ ಪುತ್ರಿ ಮೇಲೆ ರಾಮಮೂರ್ತಿ ಹಲ್ಲೆ ಮಾಡಿದ್ದಾರೆ. ಪ್ರಾಣ ಹೋದರೂ ಪ್ರೀತಿಗೆ ಒಪ್ಪುವುದಿಲ್ಲ ಎಂದಿದ್ದಾರೆ. ಆನಂತರ, ಮದುವೆಗೆ ಎರಡು ದಿನ ಸಮಯ ಕೇಳಿ ಮಗಳನ್ನು ರಾಮಮೂರ್ತಿ ಕರೆದೊಯ್ದು, ಮಾರ್ಗಮಧ್ಯೆ ಕೆರೆಗೆ ತಳ್ಳಿ ಸಹನಾಳನ್ನು ಕೊಲೆ ಮಾಡಿರುವುದಾಗಿ ಆರೋಪ ಮಾಡಲಾಗಿದೆ.
ಘಟನೆ ಸಂಬಂಧ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಹೇಳಿದ್ದಾರೆ.