×
Ad

ಬೆಂಗಳೂರು | ಯುವತಿ ಪ್ರಯಾಣಿಸುತ್ತಿದ್ದ ಕಾರು ಹಿಂಬಾಲಿಸಿ ಕಿರುಕುಳ ಆರೋಪ : ಇಬ್ಬರು ವಶಕ್ಕೆ

Update: 2024-04-01 18:30 IST

ಬೆಂಗಳೂರು: ಯುವತಿಯ ಕಾರು ಹಿಂಬಾಲಿಸಿ ಕಿರುಕುಳ ನೀಡಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಇಲ್ಲಿನ ಮಡಿವಾಳ ಠಾಣೆ ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.

ಜಗನ್ನಾಥ್ ಹಾಗೂ ತೇಜಸ್ ಎಂಬುವರನ್ನು ವಶಕ್ಕೆ ಪಡೆದುಕೊಂಡಿದ್ದು, ಬೇಗೂರು ಮೂಲದ ಯುವತಿ ನೀಡಿದ ದೂರು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ಕೃತ್ಯದಲ್ಲಿ ಮತ್ತೋರ್ವ ಭಾಗಿಯಾಗಿದ್ದು, ಆತನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯನಿಮಿತ್ತ ಮಾ.31ರ ರಾತ್ರಿ ನಗರದ ಸೇಂಟ್‍ಜಾನ್ ಆಸ್ಪತ್ರೆಗೆ ಬಂದಿದ್ದ ಯುವತಿಯು ಬೇಗೂರಿನಲ್ಲಿರುವ ತಮ್ಮ ಮನೆಗೆ ಹಿಂತಿರುಗುವಾಗ ಕೋರಮಂಗಲ ಬಳಿ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಕಿಡಿಗೇಡಿಗಳು ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಮಡಿವಾಳದವರೆಗೂ ಹಿಂಬಾಲಿಸಿಕೊಂಡು ಬಂದಿದ್ದರಿಂದ ಆತಂಕಗೊಂಡ ಯುವತಿ 112ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕಾರ್ಯಪ್ರವೃತ್ತರಾದ ಪೊಲೀಸರು ಕೂಡಲೇ ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಯುವತಿಯು ನೀಡಿದ ದೂರನ್ನು ಆಧರಿಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳ ವಿಚಾರಣೆ ವೇಳೆ ಯುವತಿಯು ತಮ್ಮ ಸ್ಕೂಟರ್ ಗೆ ಢಿಕ್ಕಿ ಹೊಡೆದಿದ್ದಾರೆ. ಹೀಗಾಗಿ ಆಕೆಯ ಕಾರನ್ನು ಹಿಂಬಾಲಿಸಿರುವುದಾಗಿ ಪೊಲೀಸರ ಮುಂದೆ ಇಬ್ಬರು ಹೇಳಿಕೆ ನೀಡಿದ್ದಾರೆ. ಮಾಹಿತಿ ಆಧರಿಸಿ ಮಹಿಳೆ ಹಾಗೂ ಆರೋಪಿತರ ಸ್ಕೂಟರ್ ಪರಿಶೀಲಿಸಲಾಗಿದ್ದು, ಢಿಕ್ಕಿ ಹೊಡೆದಿರುವ ಕುರುಹುಗಳಿಲ್ಲ. ಈ ಘಟನೆಯಲ್ಲಿ ಮತ್ತೋರ್ವ ಆರೋಪಿಯ ಬಗ್ಗೆ ಹುಡುಕಾಟ ನಡೆಸುತ್ತಿದ್ದೇವೆ ಎಂದು ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News