ಬೆಂಗಳೂರು : 2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಹೆಸರುಕಾಳು ಹಾಗೂ ಸೋಯಾಬೀನ್ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ)ಯಲ್ಲಿ ಖರೀದಿಸಲು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಅನುಮೋದನೆ ನೀಡಿದೆ.

ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಸಲ್ಲಿಸಿದ್ದ ಪ್ರಸ್ತಾವನೆಗೆ ಸ್ಪಂದಿಸಿರುವ ಕೇಂದ್ರ ಸರಕಾರ, ಸೆ.29ರಂದು ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ರಾಜ್ಯ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು, ಸೂರ್ಯಕಾಂತಿ ಹಾಗೂ ಸೋಯಾಬೀನ್ ಖರೀದಿಗೆ ಅಧಿಕೃತ ಆದೇಶ ಹೊರಡಿಸಲಿದೆ.

ಹೆಸರುಕಾಳು ಕ್ವಿಂಟಲ್‍ಗೆ 8,780 ರೂ.ಬೆಂಬಲ ಬೆಲೆ ನಿಗದಿಪಡಿಸಿದ್ದು, ಒಟ್ಟು 38,250 ಮೆಟ್ರಿಕ್ ಟನ್, ಸೂರ್ಯಕಾತಿ ಕ್ವಿಂಟಲ್‍ಗೆ 8,343ರೂ.ನಿಗದಿ ಮಾಡಿದ್ದು, ಒಟ್ಟು 13,413 ಮೆಟ್ರಿಕ್ ಟನ್ ಹಾಗೂ ಸೋಯಾಬೀನ್ ಕ್ವಿಂಟಲ್‍ಗೆ 5,708 ರೂ.ನಿಗದಿಪಡಿಸಿದ್ದು, ಒಟ್ಟು 1,15,500 ಮೆಟ್ರಿಕ್ ಟನ್ ಖರೀದಿಗೆ ಅನುಮೋದನೆ ನೀಡಲಾಗಿದೆ. ಶೀಘ್ರದಲ್ಲೇ ಕೇಂದ್ರ ಉದ್ದಿನಕಾಳಿಗೂ ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ಅನುಮೋದನೆ ನೀಡಲಿದೆ ಎಂದು ಸಚಿವ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದ್ದಾರೆ.

ನೋಂದಣಿಗೆ ಕರೆ: ಗ್ರಾಮೀಣ ಹಂತದಲ್ಲಿ ಟಿಎಪಿಸಿಎಂಎಸ್, ಪಿಎಸಿಎಸ್ ಹಾಗೂ ಎಫ್‍ಪಿಒಗಳ ಮೂಲಕ ಖರೀದಿ ಪ್ರಕ್ರಿಯೆ ನಡೆಯಲಿದೆ. ರೈತರು ಸದರಿ ಬೆಂಬಲ ಎಫ್‍ಐಡಿ ನೀಡಿ ನೋಂದಣಿ ಮನವಿ ಮಾಡಲಾಗಿದೆ. 2026-27ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃ ತ ಕೃಷಿ ಯೋಜನೆಗಳಡಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಿವೆ.

ಕೇಂದ್ರ ಬಿಡುಗಡೆ ಮಾಡಿರುವ ಅನುದಾನವು ಕರ್ನಾಟಕದ ಕೃಷಿ ಕ್ಷೇತ್ರದ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ. ರೈತರಿಗೆ ಹೆಚ್ಚಿನ ಪ್ರಯೋಜನ ಖಚಿತಪಡಿಸಿಕೊಳ್ಳಲು ನೆರವಾಗಲಿದೆ. ಜತೆಗೆ ಕೃಷಿ ಬಲಪಡಿಸಲು, ರೈತರ ಆದಾಯ ಸುಧಾರಿಸಲು ಮತ್ತು ಕೃಷಿ ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಗಾಗಿ ಕರ್ನಾಟಕದೊಂದಿಗೆ ನಿಕಟವಾಗಿ ಕೆಲಸ ಮಾಡಲು ಕೇಂದ್ರ ಬದ್ಧವಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ ಅಭಿಪ್ರಾಯಪಟ್ಟಿದ್ದಾರೆಂದು ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor