ಬೆಂಗಳೂರಿನಲ್ಲಿ ಹಾಸ್ಟಲ್, ಪಿಜಿಗಳಲ್ಲಿ ಸುರಕ್ಷತಾ ನಿಯಮಗಳ ಕಟ್ಟುನಿಟ್ಟಿನ ಅನುಸರಣೆ ಕಡ್ಡಾಯ
ಬೆಂಗಳೂರು : ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲ ಸರ್ವೀಸ್ ಅಪಾರ್ಟ್‍ಮೆಂಟ್, ಹಾಸ್ಟಲ್ ಮತ್ತು ಪಿಜಿ ಸಂಸ್ಥೆಗಳಲ್ಲಿ ಸುರಕ್ಷತಾ ನಿಯಮಗಳು ಅನುಸರಣೆ ಮಾಡುವುದು ಕಡ್ಡಾಯವಾಗಿದೆ ಎಂದು ನಗರ ಪಾಲಿಕೆ ಆಯುಕ್ತ ಡಿ.ಎಸ್.ರಮೇಶ್ ತಿಳಿಸಿದ್ದಾರೆ.
ಗುರುವಾರ ಪ್ರಕಟನೆ ಹೊರಡಿಸಿರುವ ಅವರು, ಇತ್ತೀಚೆಗೆ ಸಂಭವಿಸಿರುವ ಅನಿಲ ಸ್ಫೋಟ ಹಾಗೂ ಅಗ್ನಿ ಅವಘಡಗಳಂತಹ ದುರಂತಗಳು ಪುನರಾವೃತಿಯಾಗದಂತೆ ತಡೆಯುವ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗುತ್ತಿದೆ. ಸಾರ್ವಜನಿಕರ ಜೀವ ಹಾಗೂ ಆಸ್ತಿ ಸುರಕ್ಷತೆಯನ್ನು ಖಚಿತಪಡಿಸುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದ್ದು, ಎಲ್ಲ ಸಂಸ್ಥೆಗಳು ಸುರಕ್ಷತಾ ಮಾನದಂಡಗಳನ್ನು ಸಂಪೂರ್ಣವಾಗಿ ಪಾಲಿಸಬೇಕು ಎಂದು ಹೇಳಿದ್ದಾರೆ.
ಎಲ್ಲ ಸರ್ವೀಸ್ ಅಪಾಟ್ಮೆರ್ಂಟ್, ಹಾಸ್ಟಲ್ ಮತ್ತು ಪಿಜಿ ಸಂಸ್ಥೆಗಳ ಮಾಲಕರು ತಮ್ಮ ಸಂಸ್ಥೆಗಳಲ್ಲಿ ಎಲ್ಲ ಸುರಕ್ಷತಾ ನಿಯಮಗಳು ಪಾಲನೆಯಾಗುತ್ತಿರುವ ಬಗ್ಗೆ ಏಳು ದಿನಗಳ ಒಳಗಾಗಿ ಖಚಿತಪಡಿಸಿಕೊಳ್ಳಬೇಕು. ನಿಗದಿತ ಕಾಲಾವಕಾಶ ಮುಗಿದ ನಂತರ ನಗರ ಪಾಲಿಕೆ ವತಿಯಿಂದ ವಿಶೇಷ ತಪಾಸಣಾ ಅಭಿಯಾನವನ್ನು ಕೈಗೊಳ್ಳಲಾಗುವುದು. ಸುರಕ್ಷತೆ ಪಾಲನೆಯಾಗದಿದ್ದಲ್ಲಿ, ಸಂಸ್ಥೆಗಳ ವ್ಯಾಪಾರ ಪರವಾನಗಿಯನ್ನು ರದ್ದುಪಡಿಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇದಲ್ಲದೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆ–2024 ಹಾಗೂ ಇತರ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ದಂಡ ವಿಧಿಸಲಾಗುವುದು. ಉಲ್ಲಂಘನೆಗಳು ಜೀವ ಮತ್ತು ಸಾರ್ವಜನಿಕ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟು ಮಾಡಿದಲ್ಲಿ ಸಂಬಂಧಿತ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಪಾಲಿಸಬೇಕಾದ ಪ್ರಮುಖ ಸುರಕ್ಷತಾ ನಿಯಮಗಳು :
•ಅಕ್ರಮ ಹಾಗೂ ಅಸುರಕ್ಷಿತ ಅನಿಲ ಸಿಲಿಂಡರ್‍ಗಳ ಸಂಪೂರ್ಣ ನಿಷೇಧ
•ಸರಿಯಾದ ಗಾಳಿ ಮತ್ತು ಅಗ್ನಿ ಸುರಕ್ಷತಾ ಕ್ರಮಗಳು
•ವಿದ್ಯುತ್ ಸುರಕ್ಷತೆ ಹಾಗೂ ಓವರ್‍ಲೋಡ್ ತಪ್ಪಿಸುವ ಕ್ರಮಗಳು
•ಅಸ್ತಿತ್ವದಲ್ಲಿರುವ ವ್ಯಾಪಾರ ಪರವಾನಗಿ ಮತ್ತು ಅಗತ್ಯ ನೋಂದಣಿಗಳು