‘ಕೋಗಿಲು ಪ್ರಕರಣ’ ಮನೆ ಕೊಟ್ಟರೆ ಕೋರ್ಟ್‍ನಲ್ಲಿ ಪ್ರಶ್ನೆ, ರಾಜ್ಯಪಾಲರಿಗೆ ದೂರು : ಬಿಜೆಪಿ
ಬೆಂಗಳೂರು : ಕೋಗಿಲು ಅಕ್ರಮ ಮನೆ ತೆರವು ಪ್ರಕರಣದ ಹೊರದೇಶದವರಿಗೆ ಮನೆ ನೀಡಿದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ಇದರ ವಿರುದ್ಧ ರಾಜ್ಯಪಾಲರಿಗೆ ಮನವಿ ನೀಡುತ್ತೇವೆ ಎಂದು ಬಿಜೆಪಿಯ ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಿಬಿಎಂಪಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಶೆಡ್ ಕಟ್ಟಿಕೊಂಡಿದ್ದಾರೆ. ನಿಜವಾದ ಫಲಾನುಭವಿ 10.5ಲಕ್ಷ ರೂ.ಹಣ ಕಟ್ಟಬೇಕಾಗುತ್ತದೆ. ಬ್ಯಾಂಕ್ ಸಾಲ, ಇಲ್ಲವೇ ಸ್ವಂತ ಪ್ರಯತ್ನದಿಂದ ಇದನ್ನು ಕಟ್ಟಬೇಕು. ಇವರಿಗೆ ಬಿಬಿಎಂಪಿಯಿಂದ 5ಲಕ್ಷ ರೂ., ಅಲ್ಪಸಂಖ್ಯಾತ ಇಲಾಖೆಯಿಂದ 2.5ಲಕ್ಷ ರೂ., ಇವೆಲ್ಲವನ್ನು ಕೊಟ್ಟು ಕೇವಲ 2.5 ಲಕ್ಷ ರೂ.ನಲ್ಲಿ ಮನೆ ಕೊಡ್ತೀವಿ ಅಂದರೆ ಹೇಗೆ? ಎಂದು ಪ್ರಶ್ನಿಸಿದರು.
ಸಿಎಂ ವಸತಿ ಯೋಜನೆಯಡಿ 1ಲಕ್ಷ ಮನೆಗಳನ್ನ ಕಟ್ಟುತ್ತಿದ್ದಾರೆ. ಬೆಂಗಳೂರು ಸುತ್ತುಮುತ್ತಲು 45ಸಾವಿರ ಮನೆಗಳು ಆಗುತ್ತಿವೆ. ಅವರು ಯಾರು ಹಣವನ್ನು ಕಟ್ಟಲ್ಲ. ಅವರೆಲ್ಲ 2.5 ಲಕ್ಷ ರೂ.ಗಳಿಗೆ ಸಮೀತವಾಗಲಿದ್ದು, ಇದು ಸರಕಾರಕ್ಕೆ ಮುಜುಗರ ಆಗಲಿದೆ. ಇದಕ್ಕೂ ಮೀರಿ ಏನಾದರೂ ಮನೆಗಳನ್ನು ಕೊಟ್ಟರೆ ಕೋರ್ಟ್‍ಗೆ ಹೋಗುತ್ತೇವೆ. ಈಗಾಗಲೇ ದಾಖಲೆಗಳನ್ನು ಸಂಗ್ರಹ ಮಾಡುತ್ತಿದ್ದೇವೆ ಎಂದರು.
ನ್ಯಾಯಾಲಯಕ್ಕೆ ಹೋಗಿ ಪ್ರಶ್ನೆ ಮಾಡುವುದಲ್ಲದೇ ರಾಜ್ಯಪಾಲರಿಗೆ ಇದರ ಬಗ್ಗೆ ಮನವಿ ಕೊಡುತ್ತೇವೆ. ಕಾಂಗ್ರೆಸ್ ಹೈಕಮಾಂಡ್ ಹೇಳಿದೆ, ಕೇರಳದ ಮುಖ್ಯಮಂತ್ರಿ ಹೇಳಿದರು ಎಂದು ತಕ್ಷಣವೇ ವಲಸಿಗರಿಗೆ ಮನೆ ನೀಡಿದರೆ ರಾಜ್ಯದ ಜನರ ಗತಿ ಏನು ಎಂದು ಕೇಳಿದ ಅವರು, ಇದು ಅಲ್ಪಸಂಖ್ಯಾತರನಮ್ಮು ಮತಕ್ಕಾಗಿ ತುಷ್ಟೀಕರಣದ ಮುಂದುವರೆದ ಭಾಗ ಎಂದು ಟೀಕಿಸಿದರು.
5ಕ್ಕೆ ಹೋರಾಟಕ್ಕೆ ನಿರ್ಧಾರ: ಕೋಗಿಲು ಅಕ್ರಮ ಮನೆ ತೆರವು ಪ್ರಕರಣದಲ್ಲಿ ವಾಸಸ್ಥಳ ಕಳಕೊಂಡವರಿಗೆ ಮನೆ ನೀಡಲು ಮುಂದಾದ ಸರಕಾರದ ಕ್ರಮದ ವಿರುದ್ಧ ಇದೇ 5ರಂದು ಬಿಜೆಪಿ ವತಿಯಿಂದ ಫ್ರೀಡಂ ಪಾರ್ಕಿನಲ್ಲಿ ದೊಡ್ಡ ಪ್ರಮಾಣದ ಹೋರಾಟ ನಡೆಸಲಿದ್ದೇವೆ. ಅಲ್ಲಿನ ಸರ್ವೇ ನಂಬರ್, ಯಾವ ರಾಜ್ಯದವರು, ಯಾವ ದೇಶದವರು ಎಂಬಿತ್ಯಾದಿ ಮಾಹಿತಿಯನ್ನು ಸಂಗ್ರಹಿಸಲಿದ್ದೇವೆ ಎಂದು ಅವರು ತಿಳಿಸಿದರು.
ಸರಕಾರಿ ಜಾಗಕ್ಕೆ ವಿದ್ಯುತ್ ಸಂಪರ್ಕ ನೀಡಿದ್ದು ಅಕ್ರಮವಲ್ಲವೇ?, ಅಲ್ಲಿ ಮನೆ ಕಟ್ಟಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕಿತ್ತು. ವಿದ್ಯುತ್ ಸಂಪರ್ಕ ನೀಡಿದವರ ಮೇಲೂ ಕ್ರಮ ಕೈಗೊಳ್ಳಬೇಕಿತ್ತು. ಸರಕಾರ ತರಾತುರಿಯಲ್ಲಿ ಮನೆ ನೀಡಲು ಹೊರಟಿರುವುದು ಸರಿಯಲ್ಲ ಎಂದು ವಿಶ್ವನಾಥ್ ಆಕ್ಷೇಪಿಸಿದರು.