×
Ad

ಕಂದಾಯ ನ್ಯಾಯಾಲಯಗಳಲ್ಲಿ ಇನ್ನೂ ಆನ್‍ಲೈನ್ ವ್ಯವಸ್ಥೆ

Update: 2025-12-31 18:29 IST

ಬೆಂಗಳೂರು : ಜನ-ಕೇಂದ್ರಿತ ಆಡಳಿತ ಮತ್ತು ಪಾರದರ್ಶಕ ಆಡಳಿತದತ್ತ ಮಹತ್ವದ ಹೆಜ್ಜೆಯನ್ನಿಟ್ಟಿರುವ ರಾಜ್ಯ ಸರಕಾರವು ಪ್ರಾಯೋಗಿಕವಾಗಿ ಕಂದಾಯ ನ್ಯಾಯಾಲಯದ ವಿಚಾರಣೆಗಳ ನೇರ ಪ್ರಸಾರವನ್ನು ಆನ್‍ಲೈನ್ ಮೂಲಕ ಪ್ರಾರಂಭಿಸಲು ಆದೇಶವನ್ನು ಹೊರಡಿಸಿದೆ.

ಲೈವ್ ಮಾದರಿ ಪ್ರಸ್ತುತ ಅಭಿವೃದ್ಧಿಯ ಹಂತದಲ್ಲಿದೆ ಮತ್ತು ಶೀಘ್ರದಲ್ಲೇ ಪೈಲಟ್ ಅನ್ನು ಜಾರಿಗೆ ತರಲಾಗುವುದು. ಪ್ರಾಯೋಗಿಕ ಉಪಕ್ರಮವು ಆಡಳಿತವನ್ನು ಹೆಚ್ಚು ಸುಲಭ, ಪರಿಣಾಮಕಾರಿ ಮತ್ತು ಪಾರದರ್ಶಕವಾಗಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಸರಕಾರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನಾಗರಿಕರಿಂದ ಪರಿಣಾಮಕಾರಿತ್ವ, ಬಳಕೆ ಮತ್ತು ಪ್ರತಿಕ್ರಿಯೆಯ ಆಧಾರದ ಮೇಲೆ, ಉಪಕ್ರಮವನ್ನು ಹಂತ ಹಂತವಾಗಿ ವಿಸ್ತರಿಸಲಾಗುವುದು ಎಂದು ತಿಳಿಸಲಾಗಿದೆ.

ಕಂದಾಯ ನ್ಯಾಯಾಲಯಗಳನ್ನು ಹೇಗೆ ನಡೆಸಬೇಕೆಂದು ಯಾವುದೇ ಸ್ಪಷ್ಟ ನಿಯಮಗಳಿರಲಿಲ್ಲ. ಉಪ ವಿಭಾಗಾಧಿಕಾರಿಗಳ ಕೋರ್ಟ್‍ಗಳು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಅನೇಕ ಆದೇಶಗಳನ್ನು ಹೊರಡಿಸಿರುವ ಉದಾಹರಣೆಗಳಿವೆ. ಹೀಗಾಗಿ ಕಂದಾಯ ಕೋರ್ಟ್‍ಗಳನ್ನು ಮೊದಲು ಜನಸ್ನೇಹಿಗೊಳಿಸಬೇಕು ಹಾಗೂ ಇಲ್ಲಿನ ನ್ಯಾಯಿಕ ತೀರ್ಮಾನಗಳನ್ನು ಪಾರದರ್ಶಕಗೊಳಿಸಬೇಕು ಎಂಬ ಚರ್ಚೆ ನಡೆಯುತ್ತಿತ್ತು.

ಆ ಹಿನ್ನೆಲೆಯಲ್ಲಿ ಕಂದಾಯ ನ್ಯಾಯಾಲಯಗಳಲ್ಲಿ ಆರ್‍ಸಿಸಿ ಎಂಎಸ್ ಸೇರಿದಂತೆ ಡಿಜಿಟೈಶೇಷನ್ ಮುಖಾಂತರ ಆದೇಶಗಳನ್ನು ನೀಡುವ ವ್ಯವಸ್ಥೆಗೆ ಈಗಾಗಲೇ ಚಾಲನೆ ನೀಡಲಾಗಿತ್ತು. ಇವುಗಳ ಸುಧಾರಣಾ ಕಾನೂನುಗಳಿಗೆ ನ್ಯಾಯಿಕ ಬಲವನ್ನು ಒದಗಿಸುವ ಜೊತೆಗೆ ಇಲ್ಲಿ ನೀಡಲಾಗುತ್ತಿದ್ದ ಆದೇಶಗಳ ಮೇಲೂ ನಿಗಾ ವಹಿಸುವ ವ್ಯವಸ್ಥೆಯನ್ನು ರೂಪಿಸಲಾಗಿತ್ತು.

ಜನಸಾಮಾನ್ಯರು ತಮ್ಮ ಕೆಲಸಕ್ಕಾಗಿ ಸರಕಾರಿ ಕಚೇರಿಗಳಿಗೆ ಅಲೆದು ವ್ಯವಸ್ಥೆಯ ಮೇಲೆಯೇ ಜಿಗುಪ್ಸೆಗೊಂಡಿದ್ದಾರೆ. ಹೀಗಾಗಿ ಜನರು ಸರಕಾರಿ ಕಚೇರಿಗಳಿಗೆ ಅಲೆಯುವುದಕ್ಕೆ ವಿರಾಮ ನೀಡಬೇಕು ಎಂಬ ಉದ್ದೇಶದಿಂದಲೇ ಇ-ಆಡಳಿತಕ್ಕೆ ಹೆಚ್ಚು ಒತ್ತು ನೀಡಿದ್ದೆವು. ವಿಎಗಳಿಗೂ ಲ್ಯಾಪ್‍ಟಾಪ್ ನೀಡುವ ಮೂಲಕ ಕಂದಾಯ ಇಲಾಖೆಯ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ತರಲಾಗಿತ್ತು. ಭೂ ಸುರಕ್ಷಾ ಯೋಜನೆಯ ಮೂಲಕ ಎಲ್ಲ ಭೂ ದಾಖಲೆಗಳನ್ನೂ ಆನ್‍ಲೈನ್‍ನಲ್ಲೇ ಪಡೆಯುವುದಕ್ಕೆ ಅವಕಾಶ ನೀಡಲಾಗಿತ್ತು. ಇದೀಗ ಕಂದಾಯ ನ್ಯಾಯಾಲಯಗಳನ್ನೂ ಆನ್‍ಲೈನ್ ಮೂಲಕ ನಡೆಸುವ ಕ್ರಾಂತಿಕಾರಕ ವ್ಯವಸ್ಥೆಗೆ ಅಂಕಿತ ಹಾಕಲಾಗಿದೆ.

ಇನ್ನು ಕಂದಾಯ ನ್ಯಾಯಾಲಯಗಳಿಗೆ ವಾದಿ-ಪ್ರತಿವಾದಿಗಳು ಸುತ್ತುವುದರ ಬದಲಿಗೆ ಅವರು ಆನ್‍ಲೈನ್ ಮುಖಾಂತರವೇ ನ್ಯಾಯಾಲಯ ಕಲಾಪಗಳಿಗೆ ಭಾಗವಹಿಸುವ ಸುಲಭ ಮಾರ್ಗ ನೀಡಲಾಗಿದೆ. ಪಾರದರ್ಶಕತೆ ಮತ್ತು ನಾಗರಿಕರ ಅನುಕೂಲತೆ ಮತ್ತು ಸಬಲೀಕರಣವನ್ನು ಹೆಚ್ಚಿಸಲು ಕರ್ನಾಟಕವು ಪೈಲಟ್ ಆಧಾರದ ಮೇಲೆ ಕಂದಾಯ ನ್ಯಾಯಾಲಯಗಳ ನೇರ ಪ್ರಸಾರವನ್ನು ಪರಿಚಯಿಸಲಿದೆ.

ಈ ಉಪಕ್ರಮದ ಭಾಗವಾಗಿ, ಪ್ರಕರಣಗಳ ಪಕ್ಷಗಳು ನ್ಯಾಯಾಲಯದ ವಿಚಾರಣೆಗಳನ್ನು ಆನ್‍ಲೈನ್‍ನಲ್ಲಿ ವೀಕ್ಷಿಸಲು ಮತ್ತು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಭಾಗವಹಿಸಲು ಸಾಧ್ಯವಾಗುತ್ತದೆ. ಇದು ಕಂದಾಯ ಇಲಾಖೆ ಕಚೇರಿಗಳಲ್ಲಿ ಪದೇ ಪದೇ ಓಡಾಡುವ ಅಗತ್ಯವನ್ನು ಕಡಿಮೆ ಮಾಡುತ್ತದೆ. ಈ ಕ್ರಮವು ಸಮಯವನ್ನು ಉಳಿಸುವುದು, ನ್ಯಾಯದ ಪ್ರವೇಶವನ್ನು ಸುಧಾರಿಸುವುದು ಮತ್ತು ಸರಕಾರ ಮತ್ತು ನಾಗರಿಕರ ನಡುವೆ ವಿಶ್ವಾಸವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News