×
Ad

ಬೆಂಗಳೂರು | ಸೀರೆ ಕಳ್ಳತನ ಆರೋಪಿಸಿ ಮಹಿಳೆ ಮೇಲೆ ಹಲ್ಲೆ; ಅಂಗಡಿ ಮಾಲಕ ಸಹಿತ ಇಬ್ಬರ ಬಂಧನ

Update: 2025-09-26 18:33 IST

ಬೆಂಗಳೂರು, ಸೆ.26 : ಸೀರೆ ಕಳ್ಳತನ ಮಾಡಿದ ಆರೋಪದ ಮೇಲೆ ಮಹಿಳೆಯ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದ ಪ್ರಕರಣದಡಿ ಅಂಗಡಿ ಮಾಲಕನ ಸಹಿತ ಇಬ್ಬರನ್ನು ಇಲ್ಲಿನ ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಅಂಗಡಿ ಮಾಲಕ ಉಮೇದ್‌ ರಾಮ ಹಾಗೂ ಆತನ ಸಹಾಯಕ ಮಹೇಂದ್ರ ಸಿರ್ವಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಚಿಕ್ಕಪೇಟೆಯ ಅವೆನ್ಯೂ ರಸ್ತೆಯಲ್ಲಿರುವ ಮಾಯಾ ಸಿಲ್ಕ್ ಮತ್ತು ಸ್ಯಾರೀಸ್ ಅಂಗಡಿಗೆ ಸೆ.21ರಂದು ಆಂಧ್ರಪ್ರದೇಶ ಮೂಲದ ಮಹಿಳೆ ಹೋಗಿದ್ದು, ಅಂಗಡಿ ಮುಂಭಾಗದಲ್ಲಿ ಇಟ್ಟಿದ್ದ ಸೀರೆಯ ಬಂಡಲ್‍ನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿರುವುದನ್ನು ಅಂಗಡಿ ಮಾಲಕ ಉಮೇದ್‌ ರಾಮ ಗಮನಿಸಿದ್ದಾರೆ.

ತಕ್ಷಣ ಮಾಲಕ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿ ಸೀರೆ ಸಮೇತ ಆಕೆಯನ್ನು ಹಿಡಿದು 112ಗೆ ಕರೆ ಮಾಡಿ ಪೊಲೀಸರಿಗೆ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೊಯ್ಸಳ ಸಿಬ್ಬಂದಿ ಮಹಿಳೆಯನ್ನು ಬಂಧಿಸಿ, ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸರಿಗೆ ತಿಳಿಸುವುದಕ್ಕೂ ಮೊದಲು ಅಂಗಡಿ ಮಾಲಕ ಹಾಗೂ ಸಹಾಯಕ ಮಹಿಳೆ ಮೇಲೆ ಹಲ್ಲೆ  ನಡೆಸಿದ್ದಾರೆ.

ಈ ದೃಶ್ಯವನ್ನು ಸ್ಥಳೀಯ ವ್ಯಕ್ತಿಯೊಬ್ಬರು ವಿಡಿಯೋ ಚಿತ್ರಿಕರಣ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ದೃಶ್ಯಾವಳಿ ಆಧರಿಸಿ ಮಹಿಳೆ ಮೇಲೆ ಹಲ್ಲೆ ಮಾಡಿರುವ ಮಾಲಕ ಹಾಗೂ ಸಹಾಯಕನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿ, ಮುಂದಿನ ಕ್ರಮಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸೀರೆ ಕಳ್ಳತನ ಮಾಡಿದ್ದ ಮಹಿಳೆಯನ್ನು ಕೂಡ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News