×
Ad

ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ನಿವೇಶನ ನೋಂದಣಿ ಪ್ರಕರಣ; ಬಿಡಿಎ ನಿವೃತ್ತ ವಿಶೇಷ ಸಹಾಯಕ ಸಹಿತ ಮೂವರ ಬಂಧನ

Update: 2025-09-28 18:54 IST

ಸಾಂದರ್ಭಿಕ ಚಿತ್ರ | PC : Meta AI

ಬೆಂಗಳೂರು, ಸೆ.28: ಮೂಲ ಮಾಲಕನ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಕೆ ಮಾಡಿ ಬಿಡಿಎ ನಿವೇಶನ ನೋಂದಣಿ ಮಾಡಿಕೊಂಡಿದ್ದ ಪ್ರಕರಣದಡಿ ಮೂವರು ಆರೋಪಿಗಳನ್ನು ಇಲ್ಲಿನ ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿಡಿಎನ ನಿವೃತ್ತ ವಿಶೇಷ ಸಹಾಯಕ ಚಿಕ್ಕರಾಯಿ ಕೆ.ಎನ್.(62), ಮುರುಳೀಧರ್(60) ಹಾಗೂ ಮಂಜುನಾಥ್(48) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಜಿಲೆನ್ಸ್ ಅಧಿಕಾರಿಗಳು ನೀಡಿದ ದೂರಿನನ್ವಯ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅರ್ಕಾವತಿ ಬಡಾವಣೆಯ 2ನೇ ಬ್ಲಾಕ್‍ನಲ್ಲಿರುವ 40*60ರ ನಿವೇಶನ 2006ರಲ್ಲಿ ಬೈಲಪ್ಪ ಎಂಬುವರಿಗೆ ಹಂಚಿಕೆಯಾಗಿತ್ತು. ನಂತರ ಆ ನಿವೇಶನಕ್ಕೆ ಬದಲಿಯಾಗಿ ನಾಡಪ್ರಭು ಕೆಂಪೇಗೌಡ ಬಡಾವಣೆಯ 3ನೇ ಬ್ಲಾಕ್‍ನಲ್ಲಿರುವ ನಿವೇಶನವನ್ನು 2018ರಲ್ಲಿ ಮಂಜೂರು ಮಾಡಲಾಗಿತ್ತು. ಈ ನಡುವೆ 2019ರಲ್ಲಿ ಬೈಲಪ್ಪ ಅವರು ಮೃತಪಟ್ಟಿದ್ದರು.

ಆದ್ದರಿಂದ ನಿವೇಶನದ ಹಕ್ಕು ವರ್ಗಾವಣೆ ಕೋರಿ ಅವರ ಪತ್ನಿ ಲಕ್ಷ್ಮೀದೇವಮ್ಮ ಅವರು ಬಿಡಿಎಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಬಿಡಿಎ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ವ್ಯಕ್ತಿಯೊಬ್ಬ ತಾನೇ ಮೂಲ ಹಂಚಿಕೆದಾರ ಎಂದು ಅರ್ಜಿ ಸಲ್ಲಿಸಿ ಕೆಂಪೇಗೌಡ ಬಡಾವಣೆಯಲ್ಲಿಯೇ ಬದಲಿ ನಿವೇಶನ ಪಡೆದು ನೋಂದಣಿ ಮಾಡಿಕೊಂಡಿರುವುದು ಕಂಡುಬಂದಿತ್ತು.

ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಲಕ್ಷ್ಮೀದೇವಮ್ಮ ಅವರು ಬಿಡಿಎನಲ್ಲಿ ದೂರು ಸಲ್ಲಿಸಿದ್ದರು. ಬಿಡಿಎ ಆಧಿಕಾರಿಗಳು ಆಂತರಿಕ ವಿಚಾರಣೆ ನಡೆಸಿದಾಗ ಅಂದಿನ ವಿಶೇಷ ಸಹಾಯಕ ಕೆ.ಚಿಕ್ಕರಾಯಿ, ನಕಲಿ ಬೈಲಪ್ಪನ ಮಗ ಮಂಜುನಾಥ್, ಬ್ರೋಕರ್ ಮುರುಳೀಧರ್, ಸಾಕ್ಷಿ ಸಹಿ ಮಾಡಿರುವ ದೇವೇಂದ್ರ ಹಾಗೂ ಇತರರ ಸಂಚು ಬಯಲಾಗಿತ್ತು.

ಈ ಸಂಬಂಧ ಬಿಡಿಎ ಅಧಿಕಾರಿಗಳ ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಹಾಗೂ ಸಾರ್ವಜನಿಕರು ಈ ರೀತಿ ವಂಚನೆ ಮಾಡುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News