×
Ad

ಬೆಂಗಳೂರು | ಅಸಹಜ ಸಾವು ಪ್ರಕರಣಕ್ಕೆ ತಿರುವು: ಹೆತ್ತ ತಾಯಿಯನ್ನೇ ಹತ್ಯೆಗೈದ ಅಪ್ರಾಪ್ತ ಮಗಳು ಸೇರಿ ಐವರ ಬಂಧನ

Update: 2025-10-31 18:42 IST

ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು : ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಉತ್ತರಹಳ್ಳಿಯಲ್ಲಿ ನಡೆದಿದ್ದ ಮಹಿಳೆಯೊಬ್ಬರ ಅಸಹಜ ಸಾವು ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಮೃತ ಮಹಿಳೆ ನೇತ್ರಾವತಿ(34) ಅವರ ಅಪ್ರಾಪ್ತ ಮಗಳು ಆಕೆಯ ಅಪ್ರಾಪ್ತ ಸ್ನೇಹಿತರೇ ಹತ್ಯೆಗೈದಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.

ನೇತ್ರಾವತಿಯ ಮಗಳು ಸಹಿತ ಐವರು ಅಪ್ರಾಪ್ತರನ್ನು ಬಂಧಿಸಿರುವುದಾಗಿ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್ 25ರಂದು ರಾತ್ರಿ ನೇತ್ರಾವತಿ ಅವರು ಮಲಗಿದ್ದಾಗ ಆಕೆಗೆ ತಿಳಿಯದಂತೆ ತನ್ನ ನಾಲ್ವರು ಅಪ್ರಾಪ್ತ ಸ್ನೇಹಿತರನ್ನು ಬಾಲಕಿ ಮನೆಗೆ ಕರೆದುಕೊಂಡು ಬಂದಿದ್ದಳು. ಎಚ್ಚರಗೊಂಡ ನೇತ್ರಾವತಿ, ಮಗಳು ಮತ್ತು ಆಕೆಯ ಸ್ನೇಹಿತರ ವರ್ತನೆ ನೋಡಿ ಆಕ್ರೋಶಗೊಂಡು ಬೈದಿದ್ದರು ಎನ್ನಲಾಗಿದೆ.

ಈ ವೇಳೆ ಜಗಳ ತೀವ್ರಗೊಂಡಾಗ ಬಾಲಕಿ ಹಾಗೂ ಆಕೆಯ ಸ್ನೇಹಿತರು ನೇತ್ರಾವತಿಯ ಬಾಯಿ ಮುಚ್ಚಿ ಟವಲ್‍ನಿಂದ ಕುತ್ತಿಗೆ ಬಿಗಿದು ಹತ್ಯೆಗೈದಿದ್ದರು. ಬಳಿಕ ಆತ್ಮಹತ್ಯೆ ಎಂದು ಬಿಂಬಿಸಲು ಕುತ್ತಿಗೆಗೆ ಸೀರೆ ಕಟ್ಟಿ ಫ್ಯಾನ್‍ಗೆ ನೇತು ಹಾಕಿ ಮನೆ ಲಾಕ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.

ಘಟನೆ ನಡೆದ ಮರುದಿನ ನೇತ್ರಾವತಿ ಮೃತದೇಹ ಪತ್ತೆಯಾದ ಬಳಿಕ ಸುಬ್ರಹ್ಮಣ್ಯಪುರ ಠಾಣಾ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿದ್ದರು. ಆದರೆ, ತಾಯಿಯ ಶವ ಸಂಸ್ಕಾರಕ್ಕೂ ಮಗಳು ಬಾರದೇ ಇದ್ದಾಗ ಅನುಮಾನ ವ್ಯಕ್ತಪಡಿಸಿದ್ದ ನೇತ್ರಾವತಿ ಅವರ ಸಹೋದರಿ ಅನಿತಾ, ತನ್ನ ಸಹೋದರಿಯ ಮಗಳು ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದರು.

ಅಕ್ಟೋಬರ್ 30ರಂದು ಮನೆಗೆ ಬಂದಿದ್ದ ಬಾಲಕಿಯನ್ನು ವಿಚಾರಣೆ ನಡೆಸಿದಾಗ ಹತ್ಯೆಯ ವೃತ್ತಾಂತ ಬಯಲಾಗಿದೆ. ಸದ್ಯ ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡು ಐವರನ್ನೂ ಬಂಧಿಸಲಾಗಿದ್ದು, ವಿಚಾರಣೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News