Bengaluru | ಥಣಿಸಂದ್ರದಲ್ಲಿ ಮನೆಗಳು ಧ್ವಂಸ: ಸರಕಾರದ ನಡೆಗೆ ಮುಸ್ಲಿಮ್ ಯುನೈಟೆಡ್ ಫ್ರಂಟ್ ಆಕ್ರೋಶ
ಬೆಂಗಳೂರು : ಥಣಿಸಂದ್ರದಲ್ಲಿ ಬೆಳ್ಳಂಬೆಳಗ್ಗೆ ಬುಲ್ಡೋಜರ್ ಬಳಸಿ ಮನೆಗಳನ್ನು ಧ್ವಂಸ ಮಾಡುವ ಮೂಲಕ ಬಡವರ ಸೂರನ್ನು ಕಸಿದುಕೊಂಡಿರುವ ರಾಜ್ಯ ಸರಕಾರದ ನಡೆ ಅತ್ಯಂತ ಖಂಡನೀಯ ಎಂದು ಮುಸ್ಲಿಮ್ ಯುನೈಟೆಡ್ ಫ್ರಂಟ್ ಆಕ್ರೋಶ ವ್ಯಕ್ತಪಡಿಸಿದೆ.
ಸರಕಾರಕ್ಕೆ ಸ್ವಲ್ಪವಾದರೂ ಮಾನವೀಯತೆ ಇದ್ದಿದ್ದರೆ, ಥಣಿಸಂದ್ರದ ನಿವಾಸಿಗಳನ್ನು ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿರಲಿಲ್ಲ. ಈ ಭೂಮಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ಕ್ಕೆ ಸೇರಿದ್ದರೆ, ಅಲ್ಲಿನ ನಿವಾಸಿಗಳಿಗೆ ಸುಳ್ಳು ಭರವಸೆಗಳನ್ನು ನೀಡಿ ಭೂಮಿಯನ್ನು ನೋಂದಾಯಿಸಲು ಸಹಾಯ ಮಾಡಿದ ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು ಎಂದು ಮುಸ್ಲಿಮ್ ಯುನೈಟೆಡ್ ಫ್ರಂಟ್‍ನ ಸಂಚಾಲಕ ಮಸೂದ್ ಅಬ್ದುಲ್ ಖಾದರ್ ಕಿಡಿಗಾರಿದರು.
ಥಣಿಸಂದ್ರದಲ್ಲಿ ಬಿಡಿಎ ವತಿಯಿಂದ ಮನೆಗಳನ್ನು ಧ್ವಂಸಗೊಳಿಸಿರುವ ಸ್ಥಳಕ್ಕೆ ಮುಖಂಡರ ನಿಯೋಗದೊಂದಿಗೆ ಭೇಟಿ ನೀಡಿ, ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ವಿಳಾಸಕ್ಕೆ ವಿದ್ಯುತ್ ಸಂಪರ್ಕ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್‍ಗಳನ್ನು ನೀಡಿದ ಸರಕಾರಿ ಅಧಿಕಾರಿಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕಿತ್ತು ಎಂದು ಹೇಳಿದರು.
ಪೂರ್ವ ಸೂಚನೆ ಇಲ್ಲದೆ, ಬುಲ್ಡೋಜರ್‍ಗಳು ಮತ್ತು ಹೆಚ್ಚಿನ ಸಂಖ್ಯೆಯ ಪೊಲೀಸರೊಂದಿಗೆ ಬಂದು ಇದ್ದಕ್ಕಿದ್ದಂತೆ ಮನೆಗಳನ್ನು ಕೆಡವುದು ಮತ್ತು ಅವರಿಗೆ ಮನೆಯಲ್ಲಿನ ವಸ್ತುಗಳನ್ನು ಎತ್ತುಕೊಳ್ಳಲು ಅವಕಾಶ ನೀಡದಿರುವುದು, ಮಕ್ಕಳು, ಮಹಿಳೆಯರು ಮತ್ತು ವೃದ್ಧರನ್ನು ನೋಡಿಕೊಳ್ಳದಿರುವುದು ಕೇವಲ ಧ್ವಂಸ ಕೃತ್ಯವಲ್ಲ, ಅಮಾನವೀಯ ಮತ್ತು ಅಸಹ್ಯಕರ ಕೃತ್ಯ ಎಂದು ಅವರು ಕಿಡಿಗಾರಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಈ ಕ್ರಮವು ಬಿಡಿಎ ಅಧ್ಯಕ್ಷ ಮತ್ತು ಶಾಸಕರ ಅರಿವಿಲ್ಲದೆ ನಡೆಯಲು ಸಾಧ್ಯವಿಲ್ಲ. ಕಳೆದ ವಾರ, ಕೋಗಿಲು ಬಳಿ ನಡೆದ ಧ್ವಂಸ ಕಾರ್ಯಾಚರಣೆಯಲ್ಲಿ ನೂರಾರು ಮಂದಿ ಸಂತ್ರಸ್ತರಾಗಿದ್ದಾರೆ. ಆಡಳಿತ ನಡೆಸುವವರು ಅಲ್ಲಿನ ಜನರಿಗೆ ನೀಡಿದ ಆಶ್ವಾಸನೆಗಳನ್ನು ಈವರೆಗೆ ಈಡೆರಿಸಿಲ್ಲ. ಈಗ ಮತ್ತೊಮ್ಮೆ ಬಡವರ ಮೇಲೆ ಗದಾಪ್ರಹಾರ ನಡೆಸಿದ್ದಾರೆ ಎಂದು ಮಸೂದ್ ಅಬ್ದುಲ್ ಖಾದರ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಮತ್ತು ಬಿಡಿಎ ಅಧ್ಯಕ್ಷ ಎನ್.ಎ.ಹಾರಿಸ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಅವರು ಆಗ್ರಹಿಸಿದರು.
ಕರ್ನಾಟಕ ಮುಸ್ಲಿಮ್ ಯುನೈಟೆಡ್ ಫ್ರಂಟ್‍ನ ಜಂಟಿ ಸಂಚಾಲಕ ಮುಹಮ್ಮದ್ ಯೂಸುಫ್ ಕನ್ನಿ ಮಾತನಾಡಿ, ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಮುಸ್ಲಿಮರು, ದಲಿತರು, ದುರ್ಬಲ ವರ್ಗಗಳು ಮತ್ತು ಕಾರ್ಮಿಕರು ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಉತ್ತಮ ಕೆಲಸ ಮಾಡಿದ್ದರು, ಆದರೆ ಇಂದು ಅದೇ ಜನರ ಮೇಲೆ ಒಂದು ರೀತಿಯ ದಬ್ಬಾಳಿಕೆ ಪ್ರಾರಂಭವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಮೀಯತ್ ಉಲಮಾ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೌಲಾನಾ ಹಫೀಝ್ ಮುಹಮ್ಮದ್ ಫಾರೂಕ್, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಲಬೀದ್ ಶಾಫಿ, ಮುಸ್ಲಿಮ್ ಯುನೈಟೆಡ್ ಫ್ರಂಟ್ ಜಂಟಿ ಕಾರ್ಯದರ್ಶಿ ಅಲ್ಲಾಹ್ ಬಕ್ಷ್ ಅದಾವುಲ್ ಆಮ್ರಿ, ಸೋಲಿಡಾರಿಟಿ ಯೂತ್ ಮೂವ್ವೆಂಟ್ ರಾಜ್ಯಾಧ್ಯಕ್ಷ ಡಾ.ನಸೀಮ್ ಅಹ್ಮದ್, ಎಜಾಝ್ ಅಹ್ಮದ್ ನಿಯೋಗದಲ್ಲಿ ಉಪಸ್ಥಿತರಿದ್ದರು.