×
Ad

ಜ.12 ರಿಂದ ಜ.16ರ ವರೆಗೆ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಅಂತರ್ ವಿವಿ ಕ್ರೀಡಾಕೂಟ : ಡಾ.ಭಗವಾನ್

Update: 2026-01-10 00:19 IST

ಬೆಂಗಳೂರು : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ(ಆರ್‌ಜಿಯುಎಚ್‍ಎಸ್) ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಹಯೋಗದಲ್ಲಿ ಜ.12ರಿಂದ ಜ.16ರ ವರೆಗೆ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ 85ನೇ ಅಖಿಲ ಭಾರತ ಪುರುಷ ಹಾಗೂ ಮಹಿಳೆಯರ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್ ಶಿಪ್ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ವಿವಿಯ ಕುಲಪತಿ ಡಾ.ಭಗವಾನ್ ಬಿ.ಸಿ. ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ರೀಡಾಕೂಟದಲ್ಲಿ ದೇಶದ 312ಕ್ಕೂ ಅಧಿಕ ವಿಶ್ವವಿದ್ಯಾಲಯಗಳ 4,288 ಅಥ್ಲೀಟ್‍ಗಳು ಹಾಗೂ ಸುಮಾರು 1,000 ಕ್ರೀಡಾಧಿಕಾರಿಗಳು ಭಾಗವಹಿಸಲಿದ್ದಾರೆ. ಕ್ರೀಡಾಕೂಟದಲ್ಲಿ ತಲಾ ಎರಡು ವಿಭಾಗದಲ್ಲಿ 47 ಸ್ಪರ್ಧೆಗಳು ನಡೆಯಲಿದ್ದು, ಹೊನಲು ಬೆಳಕಿನ ವ್ಯವಸ್ಥೆ ಮತ್ತು ಅತ್ಯಾಧುನಿಕ ಫೋಟೋ ಫಿನಿಶಿಂಗ್ ತಂತ್ರಜ್ಞಾನದ ವ್ಯವಸ್ಥೆಯನ್ನು ಮಾಡಲಾಗಿದೆ. ಕ್ರೀಡಾಕೂಟವನ್ನು ಖೇಲೋಇಂಡಿಯಾ ಹಾಗೂ ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳ ಕ್ರೀಡಾಕೂಟಕ್ಕೆ ಮಾನದಂಡವಾಗಿ ಪರಿಗಣಿಸಲಾಗುವುದು ಎಂದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಈ ಹಿಂದೆ 72, 75 ಹಾಗೂ 80ನೇ ಅಥ್ಲೆಟಿಕ್ ಕ್ರೀಡಾಕೂಟವನ್ನು ಆಯೋಜಿಸಿತ್ತು. ಇದೀಗ, 85ನೇ ಕ್ರೀಡಾಕೂಟವನ್ನು 4ನೇ ಬಾರಿಗೆ ಆಯೋಜಿಸಲಾಗುತ್ತಿದ್ದು, ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ವಿದ್ಯಾರ್ಥಿಗಳಿಗೆ ಆನ್‍ಲೈನ್ ನೋಂದಣಿ ಸೌಲಭ್ಯವನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ಉದ್ಘಾಟನಾ ಸಮಾರಂಭ: ಜ.12ರಂದು ಸಂಜೆ 4:30ಕ್ಕೆ ವಿಧಾನಸಭೆಯ ಸ್ವೀಕರ್ ಡಾ. ಯು.ಟಿ. ಖಾದರ್ ಕ್ರೀಡಾಕೂಟವನ್ನು ಉದ್ಘಾಟಿಸಿ, ಕ್ರೀಡಾಜ್ಯೋತಿಯನ್ನು ಸ್ವೀಕರಿಸಲಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಧ್ವಜಾರೋಹಣವನ್ನು ನೆರೆವೇರಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಡಾ. ಭಗವಾನ್ ಬಿ.ಸಿ. ಮಾಹಿತಿ ನೀಡಿದರು.

ಸಮಾರಂಭದಲ್ಲಿ ಮೂಲ್ಕಿ-ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಸೆನೆಟ್ ಸದಸ್ಯರಾದ ಡಾ. ಶ್ರೀನಿವಾಸ ಎನ್.ಟಿ., ಎಚ್. ಸಿ. ಬಾಲಕೃಷ್ಣ, ರಿಝ್ವಾನ್ ಅರ್ಶದ್, ಪುಟ್ಟಣ್ಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ(ವೈದ್ಯಕೀಯ ಶಿಕ್ಷಣ) ಅಪರ ಮುಖ್ಯ ಕಾರ್ಯದರ್ಶಿ ಮುಹಮ್ಮದ್ ಮೊಹಸಿನ್, ಆಳ್ವಾಸ್ ಶಿಕ್ಷಣ ಪ್ರತಿμÁ್ಠನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸೇರಿದಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಕ್ಷೇತ್ರದ ಹಾಲಿ ಮತ್ತು ಮಾಜಿ ಸಂಸದರು, ಶಾಸಕರು ಹಾಗೂ ಪರಿಷತ್‍ನ ಸದಸ್ಯರು ಉಪಸ್ಥಿತರಿರಲಿದ್ದಾರೆ ಎಂದು ಅವರು ತಿಳಿಸಿದರು.

ಆಕರ್ಷಕ ಸಾಂಸ್ಕೃತಿಕ ಮೆರವಣಿಗೆ: ಕ್ರೀಡಾಕೂಟದ ಸ್ಪರ್ಧೆಗಳು ಜ.12ರಂದು ಬೆಳಗ್ಗೆ 6:30ರಿಂದಲೇ ಆರಂಭವಾಗಲಿದ್ದು, ಅಂದು ಸಂಜೆ ಕ್ರೀಡಾಕೂಟದ ಉದ್ಘಾಟನೆ ಮತ್ತು ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ನಮ್ಮ ದೇಶದ ವಿವಿಧ ಕಲೆ-ಸಂಸ್ಕೃತಿಗಳನ್ನು ಬಿಂಬಿಸುವ ಕಲಾತಂಡಗಳು ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಅವರು ತಿಳಿಸಿದರು.

ವಾಕಥಾನ್: ರಾಜೀವ್ ಗಾಂಧಿ ವಿವಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಯೋಜಿತ ಕಾಲೇಜುಗಳು, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‍ಸಿಬಿ) ಮತ್ತು ದಿಶಾ ಭೋದ್ ಫೌಂಡೇಶನ್ ಸಹಯೋಗದೊಂದಿಗೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜ.13 ರಂದು ಬೆಳಗ್ಗೆ 7 ಗಂಟೆಗೆ ನಶಾ ಮುಕ್ತ ಭಾರತ ಮತ್ತು ಅಂಗಾಂಗ ದಾನ ಅಭಿಯಾನದ ವಾಕಥಾನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ರಾಜೀವ್ ಗಾಂಧಿ ವಿವಿ ಕುಲಸಚಿವ ಅರ್ಜುನ್ ಒಡೆಯರ್, ಕುಲಸಚಿವ(ಮೌಲ್ಯಮಾಪನ) ಡಾ. ರಿಯಾಜ್ ಬಾಷಾ ಎಸ್. ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News