Bengaluru | ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಯುವ ಕಾಂಗ್ರೆಸ್‍ನಿಂದ ಪಂಜಿನ ಮೆರವಣಿಗೆ
ಬೆಂಗಳೂರು : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದ ಸಂಬಂಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ(ಕೆಪಿವೈಸಿಸಿ) ವತಿಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು.
ಶನಿವಾರ ನಗರದ ಫ್ರೀಡಂಪಾರ್ಕ್‍ನಲ್ಲಿ ಕೆಪಿವೈಸಿಸಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು, ಯುವಕರು ಪಂಜನ್ನು ಹಿಡಿದು, ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮ, ವಿದ್ಯಾರ್ಥಿಗಳ ಕುರಿತ ಕೇಂದ್ರ ಸರಕಾರದ ನಿರ್ಲಕ್ಷ್ಯದ ಧೋರಣೆ ಖಂಡಿಸಿ ‘ವಿದ್ಯಾರ್ಥಿಗಳ ಭವಿಷ್ಯ ಉಳಿಸಿ’, ‘ಪಾರದರ್ಶಕ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಿ’, ‘ನೀಟ್ ಅಕ್ರಮ ಕುರಿತು ನ್ಯಾಯಯುತ ತನಿಖೆ ನಡೆಸಿ’, ‘ಶಿಕ್ಷಣಕ್ಕೆ ಚಿಕಿತ್ಸೆ ಕೊಡಿ’ ಎಂಬ ಘೋಷಣೆಗಳನ್ನು ಕೂಗಿ ಗಮನ ಸೆಳೆದರು.
ಎಚ್.ಎಸ್.ಮಂಜುನಾಥ್ ಮಾತನಾಡಿ, ಪಾರದರ್ಶಕ, ಭ್ರಷ್ಟಾಚಾರಮುಕ್ತ ಮತ್ತು ವಿಶ್ವಾಸಾರ್ಹ ಪರೀಕ್ಷಾ ವ್ಯವಸ್ಥೆ ರೂಪಿಸುವುದು ಕೇಂದ್ರ ಸರಕಾರದ ಜವಾಬ್ದಾರಿ. ಆದರೆ, ಆ ಜವಾಬ್ದಾರಿಯನ್ನು ಮರೆತಿರುವ ಕೇಂದ್ರ ಬಿಜೆಪಿ ನಾಯಕರು 23 ಲಕ್ಷ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದ್ದಾರೆ. ಅಲ್ಲದೆ, ನೀಟ್ ಅಕ್ರಮದಿಂದ ನೂರಾರು ವಿದ್ಯಾರ್ಥಿಗಳ ಸಾವಿಗೆ ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಶ್ನೆಪತ್ರಿಕೆ ಸೋರಿಕೆಯಿಂದ ವಿದ್ಯಾರ್ಥಿಗಳ ಸಾವಿಗೆ ಕಾರಣರಾದ ಸಚಿವ ಧರ್ಮೇಂದ್ರ ಪ್ರಧಾನ್‍ಗೆ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಶುಭಾಶಯ ಕೋರಿ, ಶಿಕ್ಷಣ ಕ್ಷೇತ್ರದಲ್ಲಿ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ವಿದ್ಯಾರ್ಥಿಗಳ ಸಾವಿಗೆ ಸಂತಾಪವನ್ನೂ ಸೂಚಿಸದ, ಪಾಪಪ್ರಜ್ಞೆ, ಪಶ್ಚಾತ್ತಾಪ ಇಲ್ಲದ ವ್ಯಕ್ತಿಯ ಕಾರ್ಯ ಶ್ಲಾಘಿಸುವ ಇವರುಗಳಿಗೆ ನಾಚಿಕೆಯಿಲ್ಲವೇ? ಎಂದು ಅವರು ಕಿಡಿಕಾರಿದರು.
ವಿದ್ಯಾರ್ಥಿಗಳ ಭವಿಷ್ಯಕ್ಕಿಂತ ಯಾವುದೇ ರಾಜಕೀಯ ಲಾಭ ದೊಡ್ಡದಲ್ಲ. ಇದನ್ನು ಮರೆತಿರುವ ಬಿಜೆಪಿ ನಾಯಕರು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಕನಿಷ್ಟ ಸಂತಾಪವನ್ನೂ ಸೂಚಿಸಲು ಮುಂದಾಗುತ್ತಿಲ್ಲ. ಆದರೆ, ಶಿಕ್ಷಣ, ವಿದ್ಯಾರ್ಥಿಗಳು ಹಾಗೂ ಯುವಕರ ಮಹತ್ವ ಅರಿತಿರುವ ರಾಹುಲ್ ಗಾಂಧಿಯವರು ರಾಜಕೀಯೇತರವಾದ ಅಭಿಯಾನದ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರಕ್ಷಿಸಿ, ಮೃತ ಆಕಾಂಕ್ಷಿಗಳ ಕುಟುಂಬಕ್ಕೆ ನ್ಯಾಯ ದೊರಕಿಸಲು ಪಣ ತೊಟ್ಟಿದ್ದಾರೆ ಎಂದು ಮಂಜುನಾಥ್ ತಿಳಿಸಿದರು.
ಈ ವೇಳೆ ಯುವ ಕಾಂಗ್ರೆಸ್ ಮುಖಂಡರಾದ ತಾರೀಖ್ ಭಾಗವಾನ್, ಶ್ರೀಧರ್, ರಾಹುಲ್ ಗೌಡ, ಮೋನೀಶ್ ರೆಡ್ಡಿ, ರಾಮ್ ನಾಯಕ್ ಸೇರಿದಂತೆ ಹಲವರು ಭಾಗವಹಿಸಿದ್ದರು.