×
Ad

ಮಾಹಿತಿ ತಂತ್ರಜ್ಞಾನ ಬಳಸಿ ಪೊಲೀಸ್ ಸೇವೆಗಳನ್ನು ಜನಸ್ನೇಹಿಯಾಗಿ ರೂಪಿಸಿ : ಪ್ರಿಯಾಂಕ್ ಖರ್ಗೆ

Update: 2026-06-27 19:48 IST

ಬೆಂಗಳೂರು : ಮಾಹಿತಿ ತಂತ್ರಜ್ಞಾನದ ಸಮರ್ಪಕ ಬಳಕೆಯ ಮೂಲಕ ಪೊಲೀಸ್ ಸೇವೆಗಳನ್ನು ಇನ್ನಷ್ಟು ಪಾರದರ್ಶಕ, ಪರಿಣಾಮಕಾರಿ ಹಾಗೂ ಜನಸ್ನೇಹಿಯಾಗಿ ರೂಪಿಸುವ ಅಗತ್ಯವಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಶನಿವಾರ ಇಲ್ಲಿನ ಎಂ.ಎಸ್.ಬಿಲ್ಡಿಂಗ್‍ನಲ್ಲಿರುವ ಪೊಲೀಸ್ ಕಂಪ್ಯೂಟರ್ ವಿಭಾಗಕ್ಕೆ ಭೇಟಿ ನೀಡಿ, ಇಲಾಖೆಯ ಕಾರ್ಯಚಟುವಟಿಕೆಗಳ ಕುರಿತು ‘ಸಮಗ್ರ ಪರಿಶೀಲನೆ’ ನಡೆಸಿ ಮಾತನಾಡಿದ ಅವರು, ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಂತ್ರಿಕ ಸಾಮಥ್ರ್ಯವನ್ನು ಇನ್ನಷ್ಟು ಬಲಪಡಿಸಬೇಕಾಗಿದೆ. ಹಾಗೆಯೇ ಸಾರ್ವಜನಿಕರಿಗೆ ತ್ವರಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನಗಳ ಅಳವಡಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಪೊಲೀಸ್ ಕಂಪ್ಯೂಟರ್ ವಿಭಾಗವು ರಾಜ್ಯ ಪೊಲೀಸ್ ಇಲಾಖೆಯ ತಾಂತ್ರಿಕ ಬೆನ್ನೆಲುಬಾಗಿದ್ದು, ಇಲಾಖೆಯ ವಿವಿಧ ಡಿಜಿಟಲ್ ಜಾಲತಾಣಗಳು, ಮಾಹಿತಿ ನಿರ್ವಹಣಾ ವ್ಯವಸ್ಥೆಗಳು, ಸಾಫ್ಟ್‌ ವೇರ್ ವೇದಿಕೆಗಳು ಹಾಗೂ ಮಾಹಿತಿ ತಂತ್ರಜ್ಞಾನ ಸಂಬಂಧಿತ ಸೇವೆಗಳ ಸಮನ್ವಯ ಮತ್ತು ನಿರ್ವಹಣೆ ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯದ ಡಿಜಿಟಲ್ ಪೊಲೀಸ್ ವ್ಯವಸ್ಥೆಗೆ ಆಧಾರವಾಗಿರುವ ಪ್ರಮುಖ ತಾಂತ್ರಿಕ ಮೂಲಸೌಕರ್ಯಗಳಾದ ಸ್ಟೇಟ್ ಪೊಲೀಸ್ ಡೇಟಾ ಸೆಂಟರ್, ಕ್ರೈಂ ಅಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‍ವರ್ಕ್ ಅಂಡ್ ಸಿಸ್ಟಮ್ಸ್(ಸಿಸಿಎನ್‍ಟಿಎಸ್), ಸೈಬರ್ ಕಮಾಂಡ್ ಸೆಂಟರ್, ಸೈಬರ್ ಎಮರ್ಜೆನ್ಸಿ ನೆಟ್‍ವರ್ಕ್(ಸಿಇಎನ್) ಘಟಕಗಳು, ಹಾಗೂ ಸಾರ್ವಜನಿಕರಿಗೆ ಸೇವೆ ಒದಗಿಸುತ್ತಿರುವ ಕೆಎಸ್‍ಪಿ ಅಪ್ಲಿಕೇಷನ್, ಮತ್ತು ಸ್ಮಾರ್ಟ್ ಇ-ಬೀಟ್ ಸೇರಿದಂತೆ ವಿವಿಧ ಡಿಜಿಟಲ್ ವೇದಿಕೆಗಳನ್ನು ಮತ್ತಷ್ಟು ಜನಸ್ನೇಹಿಗೊಳಿಸಬೇಕು ಎಂದು ಅವರು ತಿಳಿಸಿದರು.

ಅಪರಾಧ ದಾಖಲೆಗಳ ನಿರ್ವಹಣೆ, ಸಂಚಾರ ವ್ಯವಸ್ಥಾಪನೆ ಹಾಗೂ ಇಲಾಖಾ ಆಡಳಿತವನ್ನು ಏಕೀಕೃತಗೊಳಿಸುವ ಪೊಲೀಸ್ ಇಲಾಖೆಯ ಪ್ರಮುಖ ಎಂಟರ್‍ಪ್ರೈಸ್ ರಿಸೋರ್ಸ್ ಪ್ಲಾನಿಂಗ್ ವೇದಿಕೆಯಾದ ಪೊಲೀಸ್ ಐಟಿ ವಿ2 ಅನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕಾಗಿದೆ. ಇಲಾಖೆಯ ಡಿಜಿಟಲ್ ಪರಿಸರವನ್ನು ಆಧುನೀಕರಿಸಬೇಕು ಎಂದು ಅವರು ಸೂಚನೆ ನೀಡಿದರು.

ಸೈಬರ್ ಅಪರಾಧ ವಿಭಾಗವು ಆನ್‍ಲೈನ್ ವಂಚನೆ, ಕ್ರಿಪ್ಟೊ ಕರೆನ್ಸಿ ವಂಚನೆ, ಹ್ಯಾಕಿಂಗ್ ಸೇರಿದಂತೆ ವಿವಿಧ ರೀತಿಯ ಸೈಬರ್ ಅಪರಾಧಗಳ ತನಿಖೆಯನ್ನು ಪರಿಣಾಮಕಾರಿಯಾಗಿ ನಡೆಸುತ್ತಿದೆ. ಸೈಬರ್ ಫೋರೆನ್ಸಿಕ್ ಘಟಕವು ಡಿಜಿಟಲ್ ಸಾಕ್ಷ್ಯಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ವಿಶ್ಲೇಷಿಸುವುದರ ಜೊತೆಗೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಿಗೆ ಅಗತ್ಯ ತಾಂತ್ರಿಕ ನೆರವನ್ನು ಒದಗಿಸುತ್ತಿದೆ ಎಂದು ಅವರು ಹೇಳಿದರು.

ಸೈಬರ್ ಭದ್ರತೆಯನ್ನು ಮತ್ತಷ್ಟು ಬಲಪಡಿಸಬೇಕು. ವಿವಿಧ ಡಿಜಿಟಲ್ ವ್ಯವಸ್ಥೆಗಳ ನಡುವೆ ಪರಸ್ಪರ ಹೊಂದಾಣಿಕೆಯನ್ನು ಹೆಚ್ಚಿಸಬೇಕು. ಪೊಲೀಸ್ ಕಾರ್ಯಾಚರಣೆಗಳಿಗೆ ಏಕೀಕೃತ ಡಿಜಿಟಲ್ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ಕಂಪ್ಯೂಟರ್ ವಿಭಾಗದ ಐಜಿಪಿ ಹಾಗೂ ಗೃಹ ಸಚಿವರ ವಿಶೇಷಾಧಿಕಾರಿ ಲಾಬು ರಾಮ್ ಹಾಗೂ ಪೊಲೀಸ್ ಕಂಪ್ಯೂಟರ್ ವಿಭಾಗ, ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ, ಸೈಬರ್ ಅಪರಾಧ ವಿಭಾಗ ಹಾಗೂ ಸೈಬರ್ ಫೋರೆನ್ಸಿಕ್ ಘಟಕದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News