×
Ad

ಕೆಂಪೇಗೌಡರ ದೂರದೃಷ್ಟಿಯ ಫಲವಾಗಿ ಬೆಂಗಳೂರು ವಿಶ್ವಮಟ್ಟದಲ್ಲಿ ಖ್ಯಾತಿ : ಡಾ.ಜಿ.ಪರಮೇಶ್ವರ್

Update: 2026-06-27 18:58 IST

ಬೆಂಗಳೂರು : ಮಾಗಡಿ ಕೆಂಪೇಗೌಡರು ಶತಮಾನಗಳ ದೂರದೃಷ್ಟಿ ಇಟ್ಟುಕೊಂಡು ಬೆಂಗಳೂರು ನಗರ ನಿರ್ಮಾಣ ಮಾಡಿದ್ದಾರೆ. ಅವರ ದೂರ ದೃಷ್ಟಿಯ ಫಲವಾಗಿಯೇ ಬೆಂಗಳೂರು ನಗರ ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಶನಿವಾರ ಚಲ್ಲಘಟ್ಟದ ಕೆಂಪೇಗೌಡ ಬಡಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ದಶಪಥ ರಸ್ತೆಯ ಲೋಕಾರ್ಪಣೆ, ಶ್ರೀ ಕೆಂಪೇಗೌಡರ ಸ್ಮಾರಕ ಅನಾವರಣ ಹಾಗೂ ಬೃಹತ್ ಹಸಿರು ಅಭಿಯಾನಕ್ಕೆ ಮುಖ್ಯಮಂತ್ರಿ ಅವರೊಂದಿಗೆ ಚಾಲನೆ ನೀಡಿದ ಬಳಿಕ ನಡೆದ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಂಪೇಗೌಡರು ಜನಿಸದೇ ಇದ್ದಿದ್ದರೆ ಮತ್ತು ಆ ಕಾಲಘಟ್ಟದಲ್ಲೇ ಯೋಜಿತ ನಗರ ನಿರ್ಮಾಣದ ದೂರದೃಷ್ಟಿ ಹೊಂದದೇ ಇದ್ದಿದ್ದರೆ, ಇಂದಿನ ಬೆಂಗಳೂರು ಈ ಮಟ್ಟಕ್ಕೆ ಬೆಳೆಯುತ್ತಿತ್ತೇ ಎಂಬ ಪ್ರಶ್ನೆ ಮೂಡುತ್ತದೆ ಎಂದು ಅವರು ಹೇಳಿದರು.

ರೈತರ ಅನುಕೂಲಕ್ಕಾಗಿ ಮಾರುಕಟ್ಟೆಗಳನ್ನು ನಿರ್ಮಿಸುವುದು, ಕುಡಿಯುವ ನೀರಿನ ಅಗತ್ಯ ಪೂರೈಸಲು ನೂರಾರು ಕೆರೆ-ಕಟ್ಟೆಗಳನ್ನು ನಿರ್ಮಿಸುವುದು ಹಾಗೂ ಜನರ ನೆಮ್ಮದಿಯ ಬದುಕಿಗೆ ಅಗತ್ಯವಾದ ಮೂಲಸೌಕರ್ಯ ಕಲ್ಪಿಸುವ ಮೂಲಕ ಕೆಂಪೇಗೌಡರು ಆಧುನಿಕ ನಗರ ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕಿದ್ದರು. ಇಂದಿನ ಬೆಂಗಳೂರು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಲು ಕೆಂಪೇಗೌಡರಿಂದ ಹಿಡಿದು ಅನೇಕ ಮಹನೀಯರ ಪರಿಶ್ರಮ ಮತ್ತು ಕೊಡುಗೆ ಕಾರಣವಾಗಿದೆ ಎಂದು ಅವರು ಹೇಳಿದರು.

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಸಚಿವ ಸಂಪುಟದಲ್ಲಿ ನಾನು ಮತ್ತು ಡಿ.ಕೆ. ಶಿವಕುಮಾರ್ ಸಚಿವರಾಗಿ ಕಾರ್ಯನಿರ್ವಹಿಸಿದ್ದು ನಮ್ಮ ಪುಣ್ಯ ಎಂದು ಹೇಳಿದ ಪರಮೇಶ್ವರ್, ಎಸ್.ಎಂ.ಕೃಷ್ಣ ಅವರ ಆಡಳಿತಾವಧಿಯಲ್ಲಿ ಬೆಂಗಳೂರಿನಲ್ಲಿ ಐಟಿ ಕ್ರಾಂತಿ ಸಂಭವಿಸಿತು. ಪ್ರತಿದಿನ 50ಕ್ಕೂ ಹೆಚ್ಚು ಕಂಪನಿಗಳು ನೋಂದಣಿಯಾಗುತ್ತಿದ್ದವು ಎಂದು ಸ್ಮರಿಸಿದರು.

ವಿಶ್ವದ ಪ್ರಮುಖ ಕಂಪನಿಗಳು ಬೆಂಗಳೂರಿನಲ್ಲಿ ತಮ್ಮ ಕಚೇರಿಗಳನ್ನು ಆರಂಭಿಸಿದ್ದು, ಲಕ್ಷಾಂತರ ಯುವಕರಿಗೆ ಉದ್ಯೋಗಾವಕಾಶಗಳು ದೊರೆತಿವೆ. ದೇಶದ ಸುಮಾರು ಶೇ. 40ರಷ್ಟು ಸಾಫ್ಟ್‌ ವೇರ್ ಉತ್ಪಾದನೆ ಬೆಂಗಳೂರಿನಲ್ಲೇ ನಡೆಯುತ್ತಿದೆ. ಬೆಂಗಳೂರು ಇನ್ನಷ್ಟು ಅಭಿವೃದ್ಧಿಯಾಗಬೇಕಿದ್ದು, ಸಾರಿಗೆ ದಟ್ಟಣೆ, ರಸ್ತೆ ಸಮಸ್ಯೆ ಹಾಗೂ ಕುಡಿಯುವ ನೀರಿನ ಕೊರತೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಪರಮೇಶ್ವರ್ ಹೇಳಿದರು.

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲಿ 10.25 ಲಕ್ಷ ಕೋಟಿ ರೂ. ಹೂಡಿಕೆಗೆ ಒಪ್ಪಂದವಾಗಿದ್ದು, ಈಗಾಗಲೇ 5 ಲಕ್ಷ ಕೋಟಿ ರೂ. ಹೂಡಿಕೆ ರಾಜ್ಯಕ್ಕೆ ಬಂದಿದೆ. ಇನ್ನೂ ಅನೇಕ ದೊಡ್ಡ ಕಂಪನಿಗಳು ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಿವೆ ಎಂದು ಅವರು ತಿಳಿಸಿದರು.

ಹೈದರಾಬಾದ್ ಮೂಲದ ಉದ್ಯಮಿಯೊಬ್ಬರು ‘ಎಷ್ಟೇ ಪ್ರಯತ್ನ ಮಾಡಿದರೂ ಜನ ಬೆಂಗಳೂರನ್ನೆ ಆಯ್ಕೆ ಮಾಡುತ್ತಾರೆ’ ಎಂದು ಹೇಳಿದ್ದನ್ನು ಉಲ್ಲೇಖಿಸಿದ ಪರಮೇಶ್ವರ್, ಬೆಂಗಳೂರಿನ ಪರಿಸರ, ಮೂಲಸೌಕರ್ಯ ಹಾಗೂ ಉದ್ಯೋಗಾವಕಾಶಗಳೆ ಈ ಆಕರ್ಷಣೆಗೆ ಪ್ರಮುಖ ಕಾರಣ ಎಂದು ಹೇಳಿದರು.

ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದ ಹಲವು ಯೋಜನೆಗಳಿಗೆ ವಿರೋಧ ಪಕ್ಷಗಳು ಅನಗತ್ಯ ವಿರೋಧ ವ್ಯಕ್ತಪಡಿಸುತ್ತಿವೆ. ಸಿದ್ದರಾಮಯ್ಯ ಹೆಬ್ಬಾಳದಿಂದ ಚಾಲುಕ್ಯ ವೃತ್ತದವರೆಗೆ ಸ್ಟೀಲ್ ಬ್ರಿಡ್ಜ್ ಯೋಜನೆ ಮಾಡಲು ಮುಂದಾದಾಗ ವಿರೋಧಿಸಿದ್ದರು. ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆ ಮಾಡಬೇಕು ಎಂಬ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುಂದರವಾದ ಬಿಡದಿ ಟೌನ್‍ಶಿಪ್ ನಿರ್ಮಾಣ ಮಾಡಲು ಹೊರಟಿದ್ದಾರೆ. ಅದಕ್ಕೂ ವಿರೋಧಿಸುತ್ತಿದ್ದಾರೆ. ಬೆಂಗಳೂರು ಅಭಿವೃದ್ಧಿಯಾಗಬಾರದೇ? ನಿಮಗೆ ಯಾವ ಉದ್ದೇಶ ಇದೆ ಎಂದು ಅವರು ವಿರೋಧ ಪಕ್ಷದವರನ್ನು ಪ್ರಶ್ನಿಸಿದರು.

ವಿರೋಧ ಪಕ್ಷದವರು ಸರಕಾರಕ್ಕೆ, ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾದ ಸಲಹೆ-ಸೂಚನೆಗಳನ್ನು ನೀಡಬೇಕು. ಬೆಂಗಳೂರಿನ ಬೆಳವಣಿಗೆ ಮತ್ತು ಕರ್ನಾಟಕದ ಅಭಿವೃದ್ಧಿಗೆ ಸಹಕಾರ ನೀಡುವ ಮನೋಭಾವವನ್ನು ಜನರು ನಿರೀಕ್ಷಿಸುತ್ತಿದ್ದಾರೆ. ವಿನಾಕಾರಣ ಅಭಿವೃದ್ಧಿ ಕಾರ್ಯಗಳಿಗೆ ವಿರೋಧಿಸುವ ನಿಮ್ಮ ಚಿಂತನೆಗಳನ್ನು ರಾಜ್ಯದ ಜನ ಒಪ್ಪುವುದಿಲ್ಲ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣರ ಪತ್ನಿ ಪ್ರೇಮಾ ಕೃಷ್ಣ, ಸಚಿವರಾದ ಕೃಷ್ಣ ಬೈರೇಗೌಡ, ಕೆ.ಎಚ್.ಮುನಿಯಪ್ಪ, ಕೆ.ಜೆ. ಜಾರ್ಜ್, ಬೈರತಿ ಸುರೇಶ್, ಸರಕಾರದ ದಿಲ್ಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎ.ಹಾರಿಸ್, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News