Bengaluru | ಅವಳಿ ಹೆಣ್ಣುಮಕ್ಕಳ ಹತ್ಯೆ; ತಾಯಿಯ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು : ತಾಯಿಯೇ ತನ್ನ ನಾಲ್ಕು ತಿಂಗಳ ಅವಳಿ ಹೆಣ್ಣುಮಕ್ಕಳನ್ನು ಹತ್ಯೆ ಮಾಡಿರುವ ಘಟನೆ ತಲಘಟ್ಟಪುರ ವಾಜರಹಳ್ಳಿಯಲ್ಲಿ ನಡೆದಿದ್ದು, ಆಕೆಯ ಗಂಡ ನೀಡಿದ ದೂರಿನ ಅನ್ವಯ ತಲಘಟ್ಟಪುರ ಪೊಲೀಸ್ ಠಾಣಾಯಲ್ಲಿ ತಾಯಿಯ ವಿರುದ್ದ ಹತ್ಯೆ ಪ್ರಕರಣ ದಾಖಲಾಗಿದೆ.
ಅವಳಿ ಹೆಣ್ಣು ಮಕ್ಕಳ ತಂದೆ ರಾಮಲಿಂಗಪ್ಪ ತನ್ನ ಪತ್ನಿ ಉಮಾದೇವಿ ವಿರುದ್ಧ ದೂರು ನೀಡಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ರಾಮಲಿಂಗಪ್ಪ, ಕಳೆದ 10 ವರ್ಷಗಳಿಂದ ಪತ್ನಿ ಹಾಗೂ ತಾಯಿಯೊಂದಿಗೆ ವಾಜರಹಳ್ಳಿಯಲ್ಲಿ ವಾಸವಿದ್ದಾರೆ. ಮಕ್ಕಳಾದ ನಂತರ ಸುಮಾರು ಒಂದೂವರೆ ತಿಂಗಳಿನಿಂದ ಪತ್ನಿಯು ಮಕ್ಕಳ ಬಗ್ಗೆ ನಿರಾಸಕ್ತಿ ತೋರಿಸುತ್ತಿದ್ದು, ಅಸಹಜವಾಗಿ ವರ್ತಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮನೋವೈದ್ಯಕೀಯ ಚಿಕಿತ್ಸೆ ಕೊಡಿಸಲಾಗಿತ್ತು. ವೈದ್ಯರು ಹೆರಿಗೆಯ ನಂತರದ ಪ್ರಸವಾನಂತರದ ಖಿನ್ನತೆ ಹಾಗೂ ಹಾರ್ಮೋನ್ ಅಸಮತೋಲನದಿಂದ ಈ ರೀತಿಯ ವರ್ತನೆ ಉಂಟಾಗಿದೆ ಎಂದು ತಿಳಿಸಿದ್ದರು ಎಂದು ದೂರಿನಲ್ಲಿ ರಾಮಲಿಂಗಪ್ಪ ವಿವರಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ಗಂಡ ಮನೆಗೆ ಮರಳಿದಾಗ, ಪತ್ನಿಯು ಕೊಠಡಿಯ ಬಾಗಿಲು ಹಾಕಿಕೊಂಡಿದ್ದರು. ಬಾಗಿಲು ತೆರೆಯಿಸಿ ನೋಡಿದಾಗ ಅವರು ಸೀರೆಯಿಂದ ಕುತ್ತಿಗೆಗೆ ನೇಣು ಹಾಕಿ ಕೊಂಡಿರುವುದು ಕಂಡುಬಂದಿದೆ. ಕೂಡಲೇ ಆಕೆಯನ್ನು ರಕ್ಷಿಸಲಾಯಿತು. ಅದೇ ಕೊಠಡಿಯಲ್ಲಿ ಇಬ್ಬರ ಹೆಣ್ಣು ಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿತ್ತು.
ಕೂಡಲೇ ಸ್ಥಳೀಯ ಆಸ್ಪತ್ರೆ ಸೇರಿಸಿದಾಗ ಮಕ್ಕಳನ್ನು ಪರೀಕ್ಷಿಸಿ, ನೀರಿನಲ್ಲಿ ಮುಳುಗಿಸಿದ ಪರಿಣಾಮ ಮಕ್ಕಳು ಮೃತಪಟ್ಟಿರುವುದಾಗಿ ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಮಹಿಳೆಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.