ಬೆಂಗಳೂರು : ನ್ಯಾಯಾಲಯದಲ್ಲಿ ಪ್ರಕರಣವಿದೆ ಎಂದು ನೆಪ ಹೇಳಿಕೊಂಡು ಒಂದೂವರೆ ವರ್ಷದಿಂದ ಸಹಾಯಕ ಅಭಿಯಂತರರು ಗ್ರೇಡ್ 1 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಅಂದಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವರೂ ಆಗಿದ್ದ ಹಾಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಹತ್ತು ಪ್ರಶ್ನೆಗಳನ್ನು ಕೇಳಿದ್ದಾರೆ.

ಬುಧವಾರ ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಈ ನೇಮಕಾತಿ ಸಂಬಂಧ ಅಂತಿಮ ಪಟ್ಟಿಯಲ್ಲಿ ಲೋಕದೋಷವಿದೆಯೆಂದು ಕೆಪಿಎಸ್ಸಿ ಅಧ್ಯಕ್ಷರು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಪತ್ರ ಬರೆದದ್ದರು. ಆಗ ಆ ಇಲಾಖೆಯ ಮಂತ್ರಿ ಯಾರಾಗಿದ್ದರು? ಸದರಿ ಇಲಾಖೆಯ ಮಂತ್ರಿ ಗಮನಕ್ಕೆ ಬಾರದೇ ನೇಮಕಾತಿ ಆದೇಶ ಪತ್ರಗಳನ್ನು ನೀಡಲಾಯಿತೇ? ಆರೆಸ್ಸೆಸ್ ಅಕೌಂಟ್ ಬಗ್ಗೆ ಕೇಳುತ್ತೀರಿ. ಮೊದಲು ಈ ಅಕೌಂಟ್ ಬಗ್ಗೆ ಮಾಹಿತಿ ಕೊಡಿ. ಪರೀಕ್ಷೆಯನ್ನು ಕೆಪಿಎಸ್ಸಿ ಮಾಡುತ್ತದೆ. ನೇಮಕಾತಿ ಪತ್ರ ಕೊಡುವುದು ಗ್ರಾಮೀಣಾಭಿವೃದ್ಧಿ ಇಲಾಖೆಯೇ ಅಲ್ಲವೇ? ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ಟೀಕಿಸಿದರು.

ಜಗತ್ತಿನಲ್ಲಿ ನಡೆಯುವ ಎಲ್ಲ ಬೆಳವಣಿಗೆಗಳ ಬಗ್ಗೆ ಪ್ರಿಯಾಂಕ್ ಖರ್ಗೆ ಅವರಿಗೆ ಮಾಹಿತಿ ಇರುತ್ತದೆ. ಆದರೆ ತಮ್ಮ ಇಲಾಖೆಯಲ್ಲಿ ನಡೆಯುವ ವಿಷಯಗಳು ಮಾತ್ರ ತಿಳಿಯುವುದಿಲ್ಲ ಎಂದರೆ ನಾವು ನಂಬಬೇಕು. ಪ್ರಿಯಾಂಕ್ ಖರ್ಗೆ ಅವರೇ ಯಾರ ಕಿವಿಯಲ್ಲಿ ಹೂವು ಇಡಲು ಹೊರಟಿದ್ದೀರಿ ಎಂದ ಅವರು, ನಾನು ಜೈಲಿನಲ್ಲಿ ಕೆಪಿಎಸ್ಸಿ ಮಾಜಿ ಅಧ್ಯಕ್ಷರನ್ನು ಭೇಟಿಯಾಗಿದ್ದು ನಿಜ. ನನ್ನ ಮೇಲಿನ ರಾಜಕೀಯ ಸೇಡಿಗಾಗಿ ಅವರನ್ನು ಬಲಿಪಶು ಮಾಡಲಾಯಿತು. ಇತ್ತೀಚೆಗೆ ಹೈಕೋರ್ಟ್ ಕೊಟ್ಟ ತೀರ್ಪನ್ನು ಬಹುಶಃ ಸಚಿವರು ಓದಿಲ್ಲ. ಅವರ ವಿರುದ್ಧ ಯಾವ ಆರೋಪವನ್ನು ಸಾಬೀತು ಮಾಡಲು ಸಾಧ್ಯವಾಗಿಲ್ಲ.ಆದರೆ, ಡಾ.ಎಚ್.ಎನ್.ಕೃಷ್ಣ ಅವರು ಯಾರ ಕಾಲದಲ್ಲಿ ಕೆಪಿಎಸ್ಸಿ ಅಧ್ಯಕ್ಷರಾಗಿ ನೇಮಕವಾದರು ಎಂಬುದು ಪ್ರಿಯಾಂಕ್ ಖರ್ಗೆ ಅವರಿಗೆ ತಿಳಿದಿಲ್ಲವೇ? ಎಸ್.ಎಂ.ಕೃಷ್ಣ ಅವರ ನೇತೃತ್ವದಲ್ಲಿ ಆ ನಿರ್ಧಾರ ಕೈಗೊಂಡ ಸಂಪುಟ ಸಭೆಯಲ್ಲಿ ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಇದ್ದರು. ಗೊತ್ತಿಲ್ಲದಿದ್ದರೆ ಕೇಳಿ ತಿಳಿದುಕೊಳ್ಳಿ. ಡಾ.ಕೃಷ್ಣ ಅವರ ಕಾಲದಲ್ಲಿ 13,000 ಜನರು ಉದ್ಯೋಗ ಪಡೆದರು ಎಂದು ಚಾಟಿ ಬೀಸಿದರು.

ಡಾ.ಕೃಷ್ಣ ಅವರ ಕಾಲದಲ್ಲಿ ಯಾವುದೇ ದೂರು ಅವರ ಮೇಲೆ ಇರಲಿಲ್ಲ. ನಂತರ ಬಂದ ಬಿಜೆಪಿ ಸರಕಾರವೇ ಅವರ ಮೇಲೆ ಅನುಮಾನ ಪಟ್ಟರು. ಬಿ.ಎಸ್.ಯಡಿಯೂರಪ್ಪ, ಶಂಕರ ಬಿದರಿ ಇನ್ನೂ ಬದುಕಿದ್ದಾರೆ. ಅವರಿಗೆ ಸತ್ಯ ಗೊತ್ತಿದ್ದು, ಕೇಳಿ ತಿಳಿದುಕೊಳ್ಳಿ. ನಾನು ಯಡಿಯೂರಪ್ಪ ಮನೆಗೆ ಹೋಗಿ ಬಂದಿದ್ದೆ. ನನ್ನ ಮತ್ತು ನಿಮ್ಮ ಗಲಾಟೆಯಲ್ಲಿ ಯಾವುದೇ ಆರೋಪ ಇಲ್ಲದವರ ಮೇಲೆ ಯಾಕೆ ಗದಾಪ್ರಹಾರ ಮಾಡುತ್ತೀರಿ ಎಂದು ಯಡಿಯೂರಪ್ಪ ಅವರನ್ನೇ ಕೇಳಿದ್ದೆ. ಅವರಿಗೆ ಅನ್ಯಾಯ ಮಾಡಬೇಡಿ ಎಂದು ಶಂಕರ ಬಿದರಿ ಅವರಿಗೂ ಹೇಳಿದ್ದೆ. ನಾನು ಕದ್ದೂಮುಚ್ಚಿ ರಾಜಕಾರಣ ಮಾಡುವುದಿಲ್ಲ. ಏನಿದ್ದರೂ ನೇರಾನೇರ ರಾಜಕಾರಣ ಮಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ಗುಡುಗಿದರು.

ಇನ್ನೊಂದು ಪ್ರಕರಣದಲ್ಲಿ ನಾನು ಕೆಪಿಎಸ್ಸಿ ಅಭ್ಯರ್ಥಿಗಳ ಪರವಾಗಿ ನಾನು ಹೋರಾಟ ನಡೆಸಿದ್ದೆ. ವಿ.ಎಸ್.ಉಗ್ರಪ್ಪ ಅವರ ಸಂಬಂಧಿಕರು ದೂರು ಕೊಟ್ಟಿದ್ದರು. 362 ಹುದ್ದೆಗಳ ಸಂಬಂಧ ಕೆಲ ಅಭ್ಯರ್ಥಿಗಳು ನ್ಯಾಯಾಲಯಕ್ಕೆ ಹೋಗಿದ್ದರು. ಆಗ ವಿಧಾನಸಭೆಯಲ್ಲಿ ಚರ್ಚೆ ಮಾಡಿ ಆಯ್ಕೆ ಪಟ್ಟಿ ತಡೆ ಹಿಡಿದಿದ್ದೇವೆ ಎಂದು ತಪ್ಪು ಮಾಹಿತಿ ಕೊಟ್ಟರು. ಅಭ್ಯರ್ಥಿಗಳು ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಕೂಲಂಕಶವಾಗಿ ಪರಿಶೀಲಿಸಿ ನ್ಯಾಯಯುತ ಕ್ರಮ ತೆಗೆದುಕೊಳ್ಳಿ ಎಂದು ದೇವೇಗೌಡರು ಪತ್ರ ಬರೆದಿದ್ದರು. ಖರ್ಗೆ ಅವರೇ.. ಮಾಹಿತಿ ಗೊತ್ತಿಲ್ಲದಿದ್ದರೆ ತಿಳಿದುಕೊಳ್ಳಿ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಕೆ.ಎ.ತಿಪ್ಪೇಸ್ವಾಮಿ, ಚೌಡರೆಡ್ಡಿ ತೂಪಲ್ಲಿ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ, ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್, ರಾಜ್ಯ ವಕ್ತಾರ ಎಚ್.ಎನ್.ದೇವರಾಜ, ನಗರ ಘಟಕದ ಅಧ್ಯಕ್ಷೆ ಶೈಲಜಾ ರಾವ್ ಮುಂತಾದವರು ಉಪಸ್ಥಿತರಿದ್ದರು.

 

ಕುಮಾರಸ್ವಾಮಿ ಕೇಳಿದ 10 ಪ್ರಶ್ನೆಗಳು:

1. ನಿಮ್ಮ ಗಮನಕ್ಕೆ ಬಾರದೇ ಅಕ್ರಮ ಮಾರ್ಗದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ಕೊಟ್ಟರಾ?

2. ರಾಜ್ಯ ಹೈಕೋರ್ಟ್‍ನಲ್ಲಿ ಪ್ರಕರಣ ನಡೆಯುತ್ತಿರುವುದು ನಿಮಗೆ ಗೊತ್ತಿಲ್ಲವೇ?

3. ಇಷ್ಟೆಲ್ಲಾ ದಾಖಲೆಗಳು ಇದ್ದರೂ ನಾನು ನಿಮ್ಮ ರಾಜೀನಾಮೆ ಕೇಳಬಾರದೇ?

4. ಎಇಇಗಳ ಅಕ್ರಮಗಳ ಬಗ್ಗೆ ನಿಮಗೆ ಗೊತ್ತಿಲ್ಲ ಅಂದರೆ ತನಿಖೆ ಮಾಡಿಸಬೇಕಿತ್ತು, ಅಲ್ಲವೇ?

5. ಅಕ್ರಮ ಎಸಗಿದ ಅಭ್ಯರ್ಥಿಗಳಿಗೆ ಷರತ್ತಿನ ಮೇಲೆ ನೇಮಕಾತಿ ಆದೇಶ ಕೊಟ್ಟಿದ್ದು ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ?

6. ನೇಮಕಾತಿ ಮತ್ತು ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಕಾರಣಕ್ಕೆ ಷರತ್ತಿನ ನೇಮಕಾತಿ ಆದೇಶ ಪತ್ರ ಕೊಟ್ಟಿದ್ದು, ಅಲ್ಲವೇ?

7. ಅಕ್ರಮ ನಡೆದಿರುವ ಬಗ್ಗೆ ಅನೇಕ ದಾಖಲೆಗಳು ಇದ್ದರೂ ತರಾತುರಿಯಲ್ಲಿ ಯಾಕೆ ನೇಮಕಾತಿ ಆದೇಶ ನೀಡಿದಿರಿ?

8. ನಿಮ್ಮ ಇಲಾಖೆಯಿಂದ ಅಪರಾಧಿ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ಕೊಟ್ಟ ವಿಷಯ ಸಚಿವರಾಗಿ ನಿಮಗೆ ಗೊತ್ತಿರಲಿಲ್ಲವೇ?

9. ಮಹಿಳಾ ಅಧಿಕಾರಿ ಕಾರ್ಯದರ್ಶಿ ಹುದ್ದೆಯಿಂದ ವರ್ಗಾವಣೆಯಾದ ನಂತರ ಆ ಸ್ಥಾನಕ್ಕೆ ಬಂದ ಅಧಿಕಾರಿ ಅಕ್ರಮ ನಡೆದಿರುವ ಬಗ್ಗೆ ಮುಖ್ಯ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಗೆ ಪತ್ರ ಬರೆದ ದಿನವೇ ನೇಮಕಾತಿ ಆದೇಶ ಪತ್ರಗಳನ್ನು ಕೊಟ್ಟಿದ್ದು ಯಾಕೆ?

10. ರೆಸಾರ್ಟ್ ನಲ್ಲಿ ಓಎಂಆರ್ ಶೀಟುಗಳನ್ನು ತಿದ್ದಿಸಿದ ಅಧಿಕಾರಿ ಜತೆಗೆ ನಿಮ್ಮ ಸಂಬಂಧ ಇಲ್ಲವೇ?

 

ಎಷ್ಟು ವರ್ಷ ಬೇಕಾದರೂ ತನಿಖೆ ಮಾಡಿ: ‘ನಿಮ್ಮ ವಿರುದ್ಧ ಪ್ರಾಸಿಕ್ಯೂಷನ್ ನಡಸುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುತ್ತದೆ’ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಚ್.ಡಿ.ಕುಮಾರಸ್ವಾಮಿ, ‘ನನ್ನ ಮೇಲೆ ಯಾವ ತನಿಖೆ ಬೇಕಾದರೂ ಮಾಡಿಕೊಳ್ಳಲಿ. ಎಷ್ಟು ವರ್ಷ ಬೇಕಾದರೂ ತನಿಖೆ ಮಾಡಲಿ. ಅದರಲ್ಲಿ ಏನೂ ಇಲ್ಲ’ ಎಂದು ಹೇಳಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor