ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಉಪ ಪೊಲೀಸ್ ಆಯುಕ್ತ ನಾರಾಯಣ್. ಎಂ ಅವರ ಹೆಸರಿನಲ್ಲಿ ನಕಲಿ ಫೆಸ್‍ಬುಕ್ ಖಾತೆಯನ್ನು ಸೃಷ್ಟಿಸಿ, ಹಣ ವಸೂಲಿ ಮಾಡುತ್ತಿದ್ದ ಹೊರ ರಾಜ್ಯದ ಓರ್ವ ಬಾಲಕನನ್ನು ಹೆಬ್ಬಗೋಡಿ ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಯಿಂದ 2 ಲಕ್ಷ ರೂ. ನಗದನ್ನು ಜಪ್ತಿ ಮಾಡಲಾಗಿದೆ.

ಆರೋಪಿಯು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಉಪ ಪೊಲೀಸ್ ಆಯುಕ್ತರಾದ ನಾರಾಯಣ್ ಎಂ. ಅವರ ಭಾವಚಿತ್ರವನ್ನು ಬಳಕೆ ಮಾಡಿಕೊಂಡು, ಅವರ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆಯನ್ನು ಸೃಷ್ಟಿಸಿದ್ದನು. ಪರಿಚಿತರಿಗೆ ಹಾಗೂ ಸಾರ್ವಜನಿಕರಿಗೆ ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿ, ನಂತರ ವಿವಿಧ ಕಾರಣಗಳನ್ನು ನೀಡಿ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು, ಪ್ರಕರಣದಲ್ಲಿ ಭಾಗಿಯಾಗಿದ್ದ ರಾಜಸ್ಥಾನ ಮೂಲದ ಗ್ರಾಮವೊಂದರಲ್ಲಿ ಸಕ್ರಿಯವಾಗಿದ್ದ ವ್ಯವಸ್ಥಿತ ಜಾಲವನ್ನು ಭೇದಿಸಿ, ಈ ಕೃತ್ಯದಲ್ಲಿ ಭಾಗಿಯಾಗಿದ್ದ ಓರ್ವ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ. ಆತನನ್ನು ವಿಚಾರಣೆಗೊಳಪಡಿಸಿದಾಗ, ತನ್ನು ಸಹಚರರೊಂದಿಗೆ ಸೇರಿ ಈ ಕೃತ್ಯವೆಸಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ದೇಶದ ಹಲವಾರು ಐಎಎಸ್ ಮತ್ತು ಐಪಿಎಸ್ ಹುದ್ದೆಯಲ್ಲಿನ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ, ಹಣ ವಸೂಲಿ ಮಾಡುತ್ತಿರುವುದಾಗಿ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಹಣ ಪಡೆದು ಮೋಸ ಮಾಡುತ್ತಿರುತ್ತಾರೆ. ಈ ರೀತಿ ನಕಲಿ ಬ್ಯಾಂಕ್ ಖಾತೆಗಳ ಮೂಲಕ ಪಡೆದಿದ್ದ ಹಣದಲ್ಲಿ 2 ಲಕ್ಷ ನಗದನ್ನು ಬಾಲಕನಿಂದ ವಶಪಡಿಸಿಕೊಳ್ಳಲಾಗಿದೆ. ಸದ್ಯ ಬಾಲಕನನ್ನು ದೇವನಹಳ್ಳಿಯಲ್ಲಿರುವ ಪುನರ್ ವಸತಿ ಕೇಂದ್ರಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣದಲ್ಲಿ ಹಲವಾರು ವ್ಯಕ್ತಿಗಳು ಭಾಗಿಯಾಗಿದ್ದು, ಅವರುಗಳ ಪತ್ತೆಕಾರ್ಯ ಮುಂದುವರೆದಿದೆ, ತನಿಖೆ ಪ್ರಗತಿಯಲ್ಲಿರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor