ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗೆ ಬೆದರಿಕೆ ಆರೋಪ; ಎಫ್‌ಐಆರ್ ರದ್ದು ಕೋರಿದ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು : ನಟ ದರ್ಶನ್ ಪ್ರಮುಖ ಆರೋಪಿಯಾಗಿರುವ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪದಡಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತು ಮುಂದಿನ ತನಿಖೆ ರದ್ದು ಎಂದು ಕೋರಿ ಇಬ್ಬರು ಆರೋಪಿಗಳು ಸಲ್ಲಿಸಿದ್ದ ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ.
ತುಮಕೂರಿನ ಅಮರಜ್ಯೋತಿ ನಗರದ ಎಂ. ಸುಹಾಸ್ ಹಾಗೂ ಉಪ್ಪಾರಹಳ್ಳಿಯ ಆರ್.ಜಿ. ವೇಣು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿ, ಸಹಾಯಕ ಪೊಲೀಸ್ ಕಮಿಷನರ್ ವರದಿ ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ಸಾಕ್ಷಿಯು ನೇರವಾಗಿ ದೂರು ದಾಖಲಿಸಿಲ್ಲ. ಸಾಕ್ಷಿಯು ಈಗಾಗಲೇ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾರೆ. ಅದರಲ್ಲಿ ಅವರು ಸುಳ್ಳು ಹೇಳಿಕೆ ನೀಡಿಲ್ಲ. ವಿಚಾರಣಾ ನ್ಯಾಯಾಲಯವು ಸಾಕ್ಷಿಗಳಿಗೆ ರಕ್ಷಣೆ ನೀಡಲು ಆದೇಶಿಸಿದೆ. ಪರ್ಯಾಯವಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಅವಕಾಶವಿಲ್ಲ ಎಂದರು.
ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಆಕರ್ಷ್ ಎಂಬಾತನ ಕರೆಯ ಮೇರೆಗೆ ಸಾಕ್ಷಿ ನುಡಿವ ವ್ಯಕ್ತಿಯು ಕಾರಿನಲ್ಲಿ ಕುಳಿತಿದ್ದು, ಈ ಸಂದರ್ಭದಲ್ಲಿ ಕೊಲೆ ಆರೋಪಿಗಳು ಯಾರು ಎಂಬುದು ಗೊತ್ತಿಲ್ಲ ಎಂದು ಹೇಳಬೇಕು. ಡಿವಿಆರ್‌ನಿಂದ ವಿಡಿಯೊ ಕ್ಲಿಪ್‌ಗಳನ್ನು ಪೊಲೀಸರೇ ಕಾಪಿ ಮಾಡಿಕೊಂಡಿದ್ದು, ಸಹಿ ಹಾಕಿಸಿಕೊಂಡಿದ್ದಾರೆ ಎಂದು ಹೇಳಬೇಕು ಎಂದು ಆರೋಪಿಗಳು ಹೇಳಿದ್ದಾರೆ ಎಂದರು.
ಈ ಹಂತದಲ್ಲಿ ನ್ಯಾಯಪೀಠ, ಬೆದರಿಕೆ ಇಲ್ಲದೇ ಕೇವಲ ಹೇಳಿಕೆಯಾದರೆ ಅದು ಅಪರಾಧವಾಗುವುದಿಲ್ಲ ಎಂದು ಮೌಖಿಕವಾಗಿ ತಿಳಿಸಿ, ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿತು.
ಅರ್ಜಿದಾರರ ವಿರುದ್ಧ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್‌ಗಳಾದ 232 (ಯಾವುದೇ ವ್ಯಕ್ತಿಗೆ ಸುಳ್ಳು ಸಾಕ್ಷ್ಯ ನೀಡುವಂತೆ ಬೆದರಿಕೆ), 61(1) (ಕ್ರಿಮಿನಲ್ ಒಳಸಂಚು) ಮತ್ತು 238 (ಸಾಕ್ಷ್ಯನಾಶ) ಆರೋಪಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಈ ಕುರಿತಂತೆ ಬೆಂಗಳೂರಿನ 50ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ನ್ಯಾಯಾಲಯ ನ್ಯಾಯಿಕ ಪ್ರಕ್ರಿಯೆಗೆ ಮುಂದಾಗಿದೆ.