Bengaluru | ಎಂಟು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿನಿಯರು ಪತ್ತೆ: ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿಐಡಿ ಸಿದ್ಧತೆ
"ಸಿಮ್ ಕಾರ್ಡ್ ಖರೀದಿಸುವಾಗ ಸುಳಿವು"
ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ಎಂಟು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿನಿಯರನ್ನು ಸಿಐಡಿ ಅಧಿಕಾರಿಗಳ ತಂಡ ತೀವ್ರ ತನಿಖೆಯನ್ನು ನಡೆಸುವ ಮೂಲಕ ಕೊನೆಗೂ ಪತ್ತೆಹಚ್ಚಿದ್ದು, ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಿದ್ಧತೆ ನಡೆಸುತ್ತಿರುವುದಾಗಿ ವರದಿಯಾಗಿದೆ.
ನಾಪತ್ತೆಯಾಗಿದ್ದ 17 ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಮತ್ತು 18 ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಈ ವಿದ್ಯಾರ್ಥಿನಿಯರು 2026ರ ಜನವರಿ 31ರಂದು ಬೆಂಗಳೂರಿನ ವಿದ್ಯಾರಣ್ಯಪುರದಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಪೋಷಕರು ನೀಡಿದ್ದ ದೂರಿನನ್ವಯ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಾಕಷ್ಟು ಹುಡುಕಾಟದ ಬಳಿಕವೂ ಪತ್ತೆಯಾಗದಿದ್ದಾಗ, ಓರ್ವ ಯುವತಿಯ ಕುಟುಂಬದವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಸುಮಾರು ಐದಾರು ತಿಂಗಳ ಬಳಿಕ ಪ್ರಕರಣವನ್ನು ಹೈಕೋರ್ಟ್ ಸಿಐಡಿಗೆ ವರ್ಗಾವಣೆಗೊಳಿಸಿ ನಿರ್ದೇಶಿಸಿತ್ತು. ತನಿಖೆ ಕೈಗೆತ್ತಿಕೊಂಡ ಸಿಐಡಿ ತಂಡ, ಮೂರು ತಿಂಗಳಿಂದ ವಿದ್ಯಾರ್ಥಿನಿಯರಿಗಾಗಿ ಹುಡುಕಾಟ ನಡೆಸಿತ್ತು. ತನಿಖೆ ವೇಳೆ ಇಬ್ಬರೂ ವಿದ್ಯಾರ್ಥಿನಿಯರು ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಸುಳಿವು ಸಿಐಡಿ ಅಧಿಕಾರಿಗಳಿಗೆ ದೊರೆತಿತ್ತು.
ಇಬ್ಬರೂ ಒಂದು ಮಗುವಿನೊಂದಿಗೆ ಆಟವಾಡುತ್ತಿದ್ದ ವೇಳೆ, ಮಗುವಿನ ತಾಯಿ ಇಬ್ಬರ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದರು. ಆ ಫೋಟೋ ಹಾಗೂ ಲಭ್ಯವಾದ ಮಾಹಿತಿಯನ್ನು ಆಧರಿಸಿ ಸಿಐಡಿ ತನಿಖೆ ಮುಂದುವರೆಸಿದರೂ ಈ ವಿದ್ಯಾರ್ಥಿನಿಯರ ಬಗ್ಗೆ ಸ್ಪಷ್ಟ ಸುಳಿವು ಸಿಕ್ಕಿರಲಿಲ್ಲ.
ಸಿಮ್ ಕಾರ್ಡ್ ಖರೀದಿಸುವಾಗ ಸುಳಿವು: ಇತ್ತೀಚೆಗೆ ಓರ್ವ ಯುವತಿ ಹೊಸ ಸಿಮ್ ಕಾರ್ಡ್ ಖರೀದಿಸಲು ತನ್ನ ಆಧಾರ್ ಕಾರ್ಡ್ ಬಳಸಿದ್ದಳು. ಈ ವೇಳೆ ಆಧಾರ್ ಸಂಖ್ಯೆಯ ಬಳಕೆಯ ಕುರಿತು ಸರ್ವಿಸ್ ಪ್ರೊವೈಡರ್ ನಿಂದ ಸಿಐಡಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ. ಆ ಮಾಹಿತಿಯ ಆಧಾರದ ಮೇಲೆ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಇಬ್ಬರೂ ಯುವತಿಯರು ಪತ್ತೆಯಾಗಿದ್ದಾರೆ.
ತನಿಖೆಯ ವೇಳೆ ಲಭ್ಯವಾದ ಮಾಹಿತಿಯ ಪ್ರಕಾರ, ಮಲೆ ಮಹದೇಶ್ವರ ಬೆಟ್ಟದಲ್ಲಿದ್ದ ಸಂದರ್ಭದಲ್ಲಿ ಓರ್ವ ಯುವತಿಗೆ ಕನಕಪುರ ತಾಲೂಕಿನ ಯುವಕನೊಬ್ಬನ ಪರಿಚಯವಾಗಿತ್ತು. ಬಳಿಕ ಇಬ್ಬರೂ ಸೇರಿಕೊಂಡು ಆ ಯುವಕನೊಂದಿಗೆ ತೆರಳಿದ್ದರು. ಯುವಕನ ಕುಟುಂಬದವರು ವಿಚಾರಿಸಿದಾಗ, ‘ತಾವಿಬ್ಬರೂ ಅಕ್ಕ-ತಂಗಿಯರು, ತಮಗೆ ತಂದೆ-ತಾಯಿ ಸೇರಿದಂತೆ ಯಾರೂ ಇಲ್ಲ, ಅನಾಥರು' ಎಂದು ಸುಳ್ಳು ಹೇಳಿದ್ದರು ಎನ್ನಲಾಗಿದೆ.
ನಂತರ ಓರ್ವ ಯುವತಿಯು ಅದೇ ಪರಿಚಯಸ್ಥ ಯುವಕನನ್ನು ವಿವಾಹವಾಗಿದ್ದಾಳೆ. ಮದುವೆಯ ಬಳಿಕ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದು, ಮತ್ತೋರ್ವ ಯುವತಿಯನ್ನೂ ತಮ್ಮೊಂದಿಗೆ ಇರಿಸಿಕೊಂಡಿದ್ದರು. ವಿವಾಹವಾಗಿರುವ ಯುವತಿ ಸದ್ಯ ಗರ್ಭಿಣಿಯಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.