ಬೆಂಗಳೂರು : ಆರೋಗ್ಯ ಇಲಾಖೆಗೆ ಅನುಕಂಪದ ಆಧಾರದ ಮೇಲೆ ಹೊಸದಾಗಿ ಸೇರ್ಪಡೆಯಾಗಿರುವ ನೌಕರರು ತಮ್ಮ ಕರ್ತವ್ಯವನ್ನು ಕೇವಲ ಉದ್ಯೋಗವೆಂದು ಪರಿಗಣಿಸದೆ, ಜನಸೇವೆಗೆ ಸಿಕ್ಕ ಅವಕಾಶವೆಂದು ಭಾವಿಸಿ ಪ್ರಾಮಾಣಿಕತೆ, ಶಿಸ್ತು ಮತ್ತು ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಕರೆ ನೀಡಿದ್ದಾರೆ.

ಬುಧವಾರ ಆರೋಗ್ಯ ಸೌಧದಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 51 ಅರ್ಹ ಅಭ್ಯರ್ಥಿಗಳಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಹಾಗೂ ಗ್ರೂಪ್-ಡಿ ಹುದ್ದೆಗಳಿಗೆ ನೇಮಕಗೊಂಡಿರುವ ಈ ಅಭ್ಯರ್ಥಿಗಳ ಪ್ರಸ್ತಾವನೆಗಳಲ್ಲಿ ಅಗತ್ಯ ದಾಖಲೆಗಳು ಪೂರ್ಣಗೊಂಡಿದ್ದ ಕಡತಗಳನ್ನು ಪರಿಶೀಲಿಸಿ ಅನುಮೋದನೆ ನೀಡಲಾಗಿದೆ. ಬಳಿಕ ಆನ್‍ಲೈನ್ ಕೌನ್ಸಿಲಿಂಗ್ ಮೂಲಕ ಅಭ್ಯರ್ಥಿಗಳಿಗೆ ಹುದ್ದೆ ಹಾಗೂ ಸ್ಥಳ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಹುದ್ದೆ ದೊರೆತ ಸಂದರ್ಭದಲ್ಲಿ ಇರುವ ಸಂತೋಷ, ಉತ್ಸಾಹ ಮತ್ತು ಸೇವಾ ಮನೋಭಾವವನ್ನು ತಮ್ಮ ವೃತ್ತಿಜೀವನದುದ್ದಕ್ಕೂ ಕಾಪಾಡಿಕೊಳ್ಳಬೇಕು. ನೇಮಕಗೊಂಡ ಸ್ಥಳದಲ್ಲಿಯೇ ಕರ್ತವ್ಯನಿಷ್ಠೆಯಿಂದ ಕಾರ್ಯನಿರ್ವಹಿಸಿ, ಅನಗತ್ಯ ವರ್ಗಾವಣೆಗಾಗಿ ಒತ್ತಡ ಅಥವಾ ಪ್ರಭಾವ ತರುವುದನ್ನು ತಪ್ಪಿಸಬೇಕು. ಸರಕಾರಿ ಸೇವೆ ಎಂದರೆ ಜನಸೇವೆ. ಜನರ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಸಲ್ಲಿಸುವ ಸೇವೆಯೇ ನಿಜವಾದ ಸಾರ್ಥಕ ಸೇವೆ ಎಂಬ ಮನೋಭಾವದಿಂದ ಪ್ರತಿಯೊಬ್ಬರೂ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ತಿಳಿಸಿದರು.

ನಾನು ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ, ಕುಷ್ಠರೋಗದಿಂದ ಗುಣಮುಖರಾದ 100ಕ್ಕೂ ಹೆಚ್ಚು ಅರ್ಹ ವ್ಯಕ್ತಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಮಾನವೀಯತೆ ಹಾಗೂ ಸಾಮಾಜಿಕ ಹೊಣೆಗಾರಿಕೆಗೆ ಆದ್ಯತೆ ನೀಡುವ ಮಾದರಿ ಕ್ರಮವನ್ನು ಕೈಗೊಂಡಿದ್ದೆವು. ಇದೀಗ ಅನುಕಂಪದ ಆಧಾರದ ಮೇಲೆ 51 ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ನೀಡುವ ಮೂಲಕ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿರುವುದು ಸಂತಸದ ಸಂಗತಿಯಾಗಿದೆ ಎಂದು ಖಾದರ್ ಹೇಳಿದರು.

ಇದೇ ವೇಳೆಯಲ್ಲಿ, ಸೇವೆಯಲ್ಲಿರುವಾಗ ಅಕಾಲಿಕವಾಗಿ ನಿಧನರಾದ ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್‍ಎಚ್‍ಎಂ) ನೌಕರರ ಕುಟುಂಬದವರಿಗೆ ಆಕ್ಸಿಸ್ ಬ್ಯಾಂಕ್ ವಿಮಾ ಯೋಜನೆಯಡಿ ಒಟ್ಟು 68 ಲಕ್ಷ ರೂ. ಮೊತ್ತದ ಪರಿಹಾರ ಧನದ ಚೆಕ್‍ನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ರಿತ್ವಿಕ್ ರಂಜನಂ ಪಾಂಡೆ, ಆಯುಕ್ತ ಗುರುದತ್ತ ಹೆಗಡೆ, ನಿರ್ದೇಶಕಿ ಡಾ.ರಜನಿ ಎಂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಮುಖ್ಯ ಆಡಳಿತಾಧಿಕಾರಿ ಗೀತಾ ಹುಡೇದ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು, ನೂತನವಾಗಿ ನೇಮಕಗೊಂಡ ನೌಕರರು ಹಾಗೂ ಅವರ ಕುಟುಂಬಸ್ಥರು ಭಾಗವಹಿಸಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor