Bengaluru | ನಕಲಿ ಔಷಧಗಳ ಪೂರೈಕೆ, ಮಾರಾಟ : ಮತ್ತೊಬ್ಬ ಆರೋಪಿಯ ಬಂಧನ
ಸಾಂದರ್ಭಿಕ ಚಿತ್ರ
ಬೆಂಗಳೂರು : ನಕಲಿ ಔಷಧಗಳ ಪೂರೈಕೆ ಹಾಗೂ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳದ(ಎಸ್‍ಐಟಿ) ಅಧಿಕಾರಿಗಳು ಆರೋಪಿಯೋರ್ವನನ್ನು ಬಂಧಿಸಿದ್ದಾರೆ. ನಗರದ ಮಿನರ್ವ ಸರ್ಕಲ್‍ನಲ್ಲಿರುವ ಕೃಪಾ ಹೆಲ್ತ್ ಕೇರ್‍ನ ಮಾಲಕ ವೀರೇಶ್ ಕುಮಾರ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.
ನಗರದ ಮಿನರ್ವ ಸರ್ಕಲ್ ಸಮೀಪವಿರುವ ಕೃಪಾ ಹೆಲ್ತ್ ಕೇರ್ ನ ಕಚೇರಿ ಮತ್ತು ಗೋಡೌನ್‍ಗಳ ಮೇಲೆ ದಾಳಿ ನಡೆಸಲಾಗಿತ್ತು. ಆಗ ನಕಲಿ ಔಷಧಿಗಳ ಭಾರೀ ಸಂಗ್ರಹ ಹಾಗೂ ನಕಲಿ ಔಷಧಿಗಳ ಸಾಗಾಣಿಕೆ ಮತ್ತು ವಿತರಣೆ, ಸಂಬಂಧಿಸಿದ ದಾಖಲೆಗಳು, ನಕಲಿ ಬಿಲ್‍ಗಳು ಸೇರಿ ಮತ್ತಿತರ ದಾಖಲೆಗಳು ಪತ್ತೆಯಾಗಿವೆ. ಕೃಪಾ ಹೆಲ್ತ್ ಕೇರ್ ಮೂಲಕ ನಗರದ 90ಕ್ಕೂ ಹೆಚ್ಚು ಆಸ್ಪತ್ರೆಗಳು, ಕ್ಲಿನಿಕ್‍ಗಳಿಗೆ ನಕಲಿ ಔಷಧಿಗಳನ್ನು ಶೇ.50ರಷ್ಟು ರಿಯಾಯಿತಿ ದರದಲ್ಲಿ ಪೂರೈಸಲಾಗಿದೆ ಎಂದು ಎಸ್‍ಐಟಿ ಅಧಿಕಾರಿಗಳು ಹೇಳಿದ್ದಾರೆ.
ಬಿಡದಿ ಬಳಿಯಿರುವ ಸಿ.ಕೆ. ತಾಂಡ್ಯದ ತೋಟದ ಮನೆಯೊಂದರ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ದಾಳಿ ಮಾಡಿದಾಗ ಈ ನಕಲಿ ಔಷಧಿ ಜಾಲ ಪತ್ತೆಯಾಗಿತ್ತು. ಈ ಬಗ್ಗೆ ತಾವರಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆಗೆ ಎಸ್‍ಐಟಿಯನ್ನು ರಚನೆ ಮಾಡಲಾಗಿತ್ತು. ಸದ್ಯ ಎಸ್‍ಐಟಿ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದು, 5 ಕೋಟಿ ರೂ.ಗೆ ಹೆಚ್ಚು ಬೆಲೆ ಬಾಳುವ ನಕಲಿ ಔಷಧಿಗಳು, ಬಿಲ್ ಸೇರಿ ಮುಂತಾದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.