ಬೆಂಗಳೂರು/ಧಾರವಾಡ : ವಿಮಾ ಕಂಪನಿಯಿಂದ ಪರಿಹಾರ ಪಡೆಯುವ ಉದ್ದೇಶದಿಂದ 16 ವರ್ಷಗಳ ಹಿಂದಿನ ಅಪಘಾತದ ಸನ್ನಿವೇಶವನ್ನು ತಿರುಚಿ, ಪಿತೂರಿ ನಡೆಸಿರುವ ಸಾಧ್ಯತೆ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಹೈಕೋರ್ಟ್‌, ಪ್ರಕರಣದ ಮರು ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಆದೇಶಿಸಿದೆ.

ಅಪಘಾತ ಪರಿಹಾರ ಕೋರಿ ಗಿರಿಧರ್‌ ಪೈ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಕೆ.ಬಿ. ಗೀತಾ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿ 3 ತಿಂಗಳೊಳಗೆ ತನಿಖಾ ವರದಿ ಸಲ್ಲಿಸುವಂತೆ ಮಂಗಳೂರಿನ ಪಶ್ಚಿಮ ವಲಯದ ಪೊಲೀಸ್‌ ಮಹಾನಿರೀಕ್ಷಕರಿಗೆ ನಿರ್ದೇಶಿಸಿದೆ. ಜತೆಗೆ, ಮೇಲ್ಮನವಿದಾರ ಗಿರಿಧರ್‌ ಪೈಗೆ 10 ಸಾವಿರ ರೂ. ದಂಡ ವಿಧಿಸಿದೆ.

ಹೈಕೋರ್ಟ್ ಆದೇಶದಲ್ಲೇನಿದೆ?

ಅಪಘಾತದ ಕುರಿತು ಗಿರಿಧರ್‌ ನೀಡಿರುವ ವಿವರಣೆಯ ವಿಶ್ವಾಸಾರ್ಹತೆಯ ಬಗ್ಗೆ ನ್ಯಾಯಪೀಠ ಗಂಭೀರ ಅನುಮಾನ ವ್ಯಕ್ತಪಡಿಸಿದೆ. ಆರಂಭಿಕ ದೂರಿನಲ್ಲಿ ಗಿರಿಧರ್‌ ಹೆಸರು ಮತ್ತು ವಿಳಾಸ ನಮೂದಿಸಿ, ಅವರೇ ಮೋಟಾರ್‌ಸೈಕಲ್‌ ಚಲಾಯಿಸುತ್ತಿದ್ದರು ಎಂದು ಹೇಳಲಾಗಿತ್ತು. ಆದರೆ, ಸುಮಾರು ಒಂದು ತಿಂಗಳ ನಂತರ ನೀಡಿದ ಹೆಚ್ಚುವರಿ ಹೇಳಿಕೆಯಲ್ಲಿ, ವಿವೇಕಾನಂದ ಆಸ್ಪತ್ರೆಯಲ್ಲಿ ಗಿರಿಧರ್‌ ಅವರನ್ನು ಭೇಟಿಯಾದ ಬಳಿಕ ಅವರು ಹಿಂಬದಿ ಸವಾರರಾಗಿದ್ದರು ಎಂಬುದು ತಿಳಿಯಿತು ಎಂದು ದೂರುದಾರ ಹೇಳಿದ್ದರು. ದೂರುದಾರರು ಗಿರಿಧರ್‌ ಅವರನ್ನು ಭೇಟಿಯಾಗಿದ್ದಾಗಿ ಹೇಳಿದ ದಿನ ಅವರು ಆ ಆಸ್ಪತ್ರೆಗೆ ದಾಖಲಾಗಿಯೇ ಇರಲಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ.

ಚಾಲನಾ ಪರವಾನಗಿ ಹೊಂದಿದ್ದ ನಾಗಪ್ಪ ಅವರನ್ನು ಅಪಘಾತದ ಸುಮಾರು ಒಂದು ತಿಂಗಳ ಬಳಿಕವಷ್ಟೇ ಮೋಟಾರ್‌ಸೈಕಲ್‌ ಸವಾರ ಎಂದು ಬಿಂಬಿಸಲಾಗಿದೆ. ಅಲ್ಲಿಯವರೆಗೆ ಗಿರಿಧರ್‌ ಅವರನ್ನೇ ಶಂಕಿತ ಸವಾರನಾಗಿ ಪರಿಗಣಿಸಲಾಗಿತ್ತು. ಆ ರಾತ್ರಿ ನಾಗಪ್ಪ ಅವರ ಮೋಟಾರ್‌ ಸೈಕಲ್‌ನಲ್ಲಿ ತಾವು ಹಿಂಬದಿ ಸವಾರರಾಗಿದ್ದುದು ಹೇಗೆ ಎಂಬ ಗಿರಿಧರ್‌ ವಿವರಣೆಯನ್ನೂ ನಂಬಲು ಕಷ್ಟವೆಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಅಪಘಾತದ ಬಳಿಕ ನಾಗಪ್ಪ ತಮ್ಮನ್ನು ಮಧ್ಯರಾತ್ರಿ ರಸ್ತೆ ಬದಿಯಲ್ಲೇ ಬಿಟ್ಟು, ಲಾರಿಯಲ್ಲಿ ಗ್ರಾಮಕ್ಕೆ ಮರಳಿದ್ದರು ಎಂಬ ಹೇಳಿಕೆಯೂ ಅಸಹಜ ಮತ್ತು ವಿಶ್ವಾಸಾರ್ಹತೆ ಇಲ್ಲದ್ದು ಎಂದು ಹೇಳಿದೆ.

ಪ್ರಕರಣದ ದಾಖಲೆಗಳು ಗಿರಿಧರ್‌, ಅವರ ತಂದೆ ಹಾಗೂ ಮೋಟಾರ್‌ ಸೈಕಲ್‌ ಸವಾರನೆಂದು ಹೇಳಲಾದ ನಾಗಪ್ಪ ನಡುವೆ ಒಳಸಂಚು ನಡೆದಿರುವ ಸಾಧ್ಯತೆಯತ್ತ ಬೆರಳು ಮಾಡುತ್ತವೆ. ವಿಮಾ ಕಂಪನಿಯಿಂದ ಪರಿಹಾರ ಪಡೆಯಲು ಇವರು ಕೈ ಜೋಡಿಸಿರುವ ಶಂಕೆ ಇರುವುದರಿಂದ ಹೊಸದಾಗಿ ಪೊಲೀಸ್‌ ತನಿಖೆ ಅಗತ್ಯ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪರಿಹಾರದ ಅರ್ಜಿ ತಿರಸ್ಕರಿಸಿದ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಯ (ಎಂಎಸಿಟಿ) ಕ್ರಮವನ್ನು ಎತ್ತಿಹಿಡಿದೆ. ಜತೆಗೆ, ಅಪಘಾತದ ವಾಸ್ತವ ಸನ್ನಿವೇಶ ಮತ್ತು ನಂತರ ಸಲ್ಲಿಸಲಾದ ವಿಮಾ ಪರಿಹಾರದ ಅರ್ಜಿಯ ಕುರಿತು ಎಸ್‌ಐಟಿ ಸಮಗ್ರ ತನಿಖೆ ನಡೆಸಬೇಕೆಂದು ನಿರ್ದೇಶಿಸಿದೆ.

ಪ್ರಕರಣವೇನು?

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಂದನಗೇರಿ ಗ್ರಾಮದ ನಿವಾಸಿ ಗಿರಿಧರ್‌ ಪೈ ಅವರು 2010ರ ಸೆಪ್ಟೆಂಬರ್ 15ರಂದು ಅಂಕೋಲಾ-ಕುಮಟಾ ರಸ್ತೆಯ ಶಿರೂರು ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾಗಿ ಹೇಳಿದ್ದರು. ತಾವು ಹಿಂಬದಿ ಸವಾರರಾಗಿದ್ದ ಮೋಟಾರ್‌ ಸೈಕಲ್‌ ನಿಯಂತ್ರಣ ಕಳೆದುಕೊಂಡು ಉರುಳಿ ಬಿದ್ದಿತ್ತು ಎಂದು ಗಿರಿಧರ್ ಪೈ ಪ್ರತಿಪಾದಿಸಿದ್ದರು. ಮೋಟಾರ್‌ ಸೈಕಲ್‌ ಗಿರಿಧರ್‌ ಅವರ ತಂದೆ ನೀಲಕಂಠ ಪೈ ಅವರಿಗೆ ಸೇರಿದ್ದು, ಅದನ್ನು ಗ್ರಾಮದ ನಾಗಪ್ಪ ಪುಂಡಲೀಕ ಪೈ ಅವರಿಗೆ ನೀಡಲಾಗಿತ್ತು. ಅಪಘಾತದ ಬಳಿಕ 20 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಗಿ ಹೇಳಿದ್ದ ಗಿರಿಧರ್‌, 15 ಲಕ್ಷ ರೂ. ಪರಿಹಾರ ಕೋರಿ ಕುಮಟಾ ಎಂಎಸಿಟಿ‌ಗೆ ಅರ್ಜಿ ಸಲ್ಲಿಸಿದ್ದರು.

ಆದರೆ, ಯುನೈಟೆಡ್‌ ಇಂಡಿಯಾ ಇನ್ಶ್ಯೂರೆನ್ಸ್‌ ಕಂಪನಿಯು ಪರಿಹಾರದ ಅರ್ಜಿ ವಿರೋಧಿಸಿತ್ತು. ಅಪಘಾತದಲ್ಲಿ ಮೋಟಾರ್‌ ಸೈಕಲ್‌ ಭಾಗಿಯಾಗಿರದಿದ್ದರೂ, ವಿಮಾ ಪರಿಹಾರ ಪಡೆಯುವ ಉದ್ದೇಶದಿಂದ ಅದನ್ನು ಸುಳ್ಳಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿತ್ತು. ಎಂಎಸಿಟಿ 2016ರ ನವೆಂಬರ್ 28ರಂದು ಪರಿಹಾರದ ಅರ್ಜಿ ತಿರಸ್ಕರಿಸಿತ್ತು. ಎಂಎಸಿಟಿ ಆದೇಶ ಪ್ರಶ್ನಿಸಿ ಗಿರಿಧರ್ ಪೈ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor