ಬೆಂಗಳೂರು : ಬೆಂಗಳೂರು ಉತ್ತರ ತಾಲ್ಲೂಕಿನ ಸೊಂಡೆಕೊಪ್ಪದಲ್ಲಿರುವ ವಿದೇಶಿ ಪ್ರಜೆಗಳ ನಿರ್ಬಂಧಿತ ಕೇಂದ್ರದಲ್ಲಿ ಕರ್ತವ್ಯನಿರತರಾಗಿದ್ದ ಪೊಲೀಸರ ಮೇಲೆಯೇ ನೈಜೀರಿಯಾ ಪ್ರಜೆ ಹಲ್ಲೆ ಮಾಡಿದ್ದು, ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ನೈಜೀರಿಯಾ ಪ್ರಜೆ ವಿರುದ್ಧ ಪ್ರಕರಣ ದಾಖಲಾಗಿದೆ.

ಕೆವಿನ್ ಜೇಮ್ಸ್ ಎಂಬಾತ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ವೀಸಾ ಅವಧಿ ಮುಗಿದಿದ್ದರೂ ನಗರದಲ್ಲಿ ಆಕ್ರಮವಾಗಿ ನೆಲೆಸಿದ್ದ ವಿದೇಶಿ ಪ್ರಜೆಗಳನ್ನು ಹಾಗೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದನ್ನು ಈ ನಿರ್ಬಂಧಿತ  ಕೇಂದ್ರದಲ್ಲಿ ಇರಿಸಲಾಗಿತ್ತು. ಈ ಕೇಂದ್ರದಲ್ಲಿರುವ ನೈಜೀರಿಯಾ ಪ್ರಜೆ ಕೆವಿನ್ ಜೇಮ್ಸ್ ವಿರುದ್ಧ ಎನ್‍ಡಿಪಿಎಸ್ ಹಾಗೂ ಕೊಲೆ ಯತ್ನ ಸೇರಿದಂತೆ ನಾಲ್ಕು ಗಂಭೀರ ಪ್ರಕರಣದಲ್ಲಿ ಭಾಗಿಯಾಗಿದ್ದನು.

ಈ ಎಲ್ಲ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದರೂ, ಆತನ ವೀಸಾ ಅವಧಿ ಮುಗಿದಿರುವ ಹಿನ್ನಲೆಯಲ್ಲಿ ನ್ಯಾಯಾಲಯದ ಸೂಚನೆಯಂತೆ ನಿರ್ಬಂಧಿತ ಕೇಂದ್ರದಲ್ಲಿ ಆತನನ್ನು ಇರಿಸಲಾಗಿದೆ.

ಆದರೆ ತನ್ನನ್ನು ಬಿಡುಗಡೆ ಮಾಡುವಂತೆ ಆತ ಕೂಗಾಡಿ, ಕಿರುಚಾಡಿ ನಿರ್ಬಂಧಿತ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಎಎಸ್‍ಐ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor