ವಿಬಿ ಜಿ-ರಾಮ್ ಜಿ ಯೋಜನೆಯಡಿ ‘ನರೇಗಾ’ ಸಿಬ್ಬಂದಿ ಮುಂದುವರಿಕೆಗೆ ಆದೇಶ ಹೊರಡಿಸಲು ಆಗ್ರಹಿಸಿ ಧರಣಿ
ಬೆಂಗಳೂರು : ವಿಬಿ ಜಿ-ರಾಮ್ಜಿ ಯೋಜನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮನರೇಗಾ ಸಿಬ್ಬಂದಿಗಳ ಮುಂದುವರಿಕೆಯ ಕುರಿತು ಸರಕಾರ ಸೂಕ್ತ ಆದೇಶ ಹೊರಡಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ನಗರದ ಫ್ರೀಡಂ ಪಾರ್ಕ್ನಲ್ಲಿ ಕರ್ನಾಟಕ ರಾಜ್ಯ ಮಹಾತ್ಮಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಧರಣಿ ನಡೆಸಲಾಯಿತು.
2008ರಿಂದ ನಿರಂತರವಾಗಿ ನರೇಗಾ ಯೋಜನೆಯಡಿ ದಕ್ಷತೆ, ಪ್ರಾಮಾಣಿಕವಾಗಿ ಕರ್ತವ್ರ್ಯ ನಿರ್ವಹಿಸಿ ಯೋಜನೆ ಅನುಷ್ಠಾನವನ್ನು ಉತ್ತಮ ರೀತಿಯಲ್ಲಿ ಮಾಡಿದ್ದೇವೆ. ಹೊರಗುತ್ತಿದೆ ಸಿಬ್ಬಂದಿಗಳಾದ ನಾವು ಸುಮಾರು 12ರಿಂದ 15 ವರ್ಷಗಳ ಕಾಲ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದೇವೆ. ನಮ್ಮ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಸೇವಾ ಭದ್ರತೆಯನ್ನು ರೂಪಿಸಿ, ಖಾಯಂಗೊಳಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಆರ್ಡಿಪಿಆರ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ವಿದ್ಯಾರ್ಹತೆಗೆ ಅನುಗುಣವಾಗಿ ಮನರೇಗಾ ಸಿಬ್ಬಂದಿಗಳನ್ನೇ ನೇರ ನೇಮಕ ಅಥವಾ ಪರೀಕ್ಷೆಯ ಮೂಲಕ ನೇಮಕ ಮಾಡಿಕೊಳ್ಳಲು, ಸೂಕ್ತ ಆದೇಶ ಹೊರಡಿಬೇಕು. ಎಲ್ಲ ನೌಕರರಿಗೆ ಸುಪ್ರೀಂ ಕೋರ್ಟ್ ಆದೇಶದಂಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಕುರಿತು ಸರಕಾರಿ ಆದೇಶ ಹೊರಡಿಸಿ, ಆದೇಶವನ್ನು ಪರಿಣಾಮಕಾರಿ ಜಾರಿಯಾಗುವಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಪ್ರತಿ ತಿಂಗಳು ನಿಗದಿತ ದಿನಾಂಕದಂದು ಮಾನವ ಸಂಪನ್ಮೂಲ ಸಂಸ್ಥೆಗಳಿಂದ ವೇತನ ಪಾವತಿಸಿ, ಕಡ್ಡಾಯವಾಗಿ ಪಾವತಿಸಿರುವ ವೇತನ, ಪಿಎಫ್ ಹಾಗೂ ಇಎಸ್ಐ ವಿವರ ನೀಡಿದ ನಂತರ ಮಾನವ ಸಂಪನ್ಮೂಲ ಸಂಸ್ಥೆಗಳಿಗೆ ಸರಕಾರ ಹಣ ಪಾವತಿ ಮಾಡಬೇಕು. ಹೊರಗುತ್ತಿಗೆ ಸಿಬ್ಬಂದಿ ವರ್ಗಾವಣೆಗೆ ಸಂಬಂದಿಸಿದಂತೆ ಅಂತರ್ ಜಿಲ್ಲಾ ವರ್ಗಾವಣೆಯ ಅರ್ಜಿಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
10 ವರ್ಷಕ್ಕಿಂತ ಹೆಚ್ಚು ಅವಧಿ ಸೇವೆ ಸಲ್ಲಿಸಿರುವ ಸಿಬ್ಬಂದಿ ಕೆಲಸ ಬಿಟ್ಟ ಮೇಲೆ ಅವರಿಗೆ ಗ್ರ್ಯಾಚುಟಿ ಸೌಲಭ್ಯ ಒದಗಿಸುವಂತೆ ಮಾನವ ಸಂಪನ್ಮೂಲ ಸಂಸ್ಥೆಗಳಿಗೆ ಸೂಕ್ತ ನಿರ್ದೇಶನ ನೀಡಿ, ಆದೇಶ ಹೊರಡಿಸಬೇಕು. ಕುಂದು ಕೊರತೆಗಳ ಕುರಿತು ಚರ್ಚಿಸಲು ಜಿಲ್ಲಾಮಟ್ಟದಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಹಾಗೂ ರಾಜ್ಯಮಟ್ಟದಲ್ಲಿ 6 ತಿಂಗಳಿಗೊಮ್ಮೆ ಸಭೆ ನಡೆಸಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಧರಣಿಯಲ್ಲಿ ವಿವಿಧ ಜಿಲ್ಲೆಗಳಿಂದ ಬಂದ ಸಾವಿರಾರು ಜನ ಮನರೇಗಾ ನೌಕರರು ಭಾಗವಹಿಸಿದ್ದರು.
ಪ್ರಮುಖ ಆಗ್ರಹಗಳು:
•ಪಿಎಫ್ ಹಣ ದುರುಪಯೋಗ ಮಾಡಿಕೊಂಡ ಮಾನವ ಸಂಪನ್ಮೂಲ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಸೂಕ್ತ ನ್ಯಾಯ ಒದಗಿಸಬೇಕು.
•ಕಾರ್ಮಿಕ ಇಲಾಖೆಯಿಂದ ನಿಗದಿ ಪಡಿಸಿರುವ ಕನಿಷ್ಟ ವೇತನ ನೀಡುವುದು.
•ವೈದ್ಯಕೀಯ ರಜೆ, ಪಿತೃತ್ವ ರಜೆ ಹಾಗೂ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ವೇತನ ಸಹಿತ ಋತುಚಕ್ರ ರಜೆಯನ್ನು ನೀಡಬೇಕು.
•ಪ್ರತಿ ವರ್ಷ ಶೇ.10ರಷ್ಟು ವೇತನ ಹೆಚ್ಚಳ ಮಾಡಬೇಕು.
•ಪ್ರಯಾಣ ಭತ್ಯೆಯನ್ನು 2 ಸಾವಿರ ರೂ.ದಿಂದ 5 ಸಾವಿರ ರೂ.ಗೆ ಹೆಚ್ಚಿಸಬೇಕು.