ಬೆಂಗಳೂರು : ರಾಷ್ಟ್ರವನ್ನು ಅಭದ್ರಗೊಳಿಸಲು ನಡೆಯುತ್ತಿರುವ ಸಂಚಿಗೆ ರಾಜ್ಯದ ಕಾಂಗ್ರೆಸ್ ಸರಕಾರವು ಹಣವನ್ನು ನೀಡುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಶುಕ್ರವಾರ ವಿಜಯನಗರದ ಬಂಟರ ಸಂಘದಲ್ಲಿ ಕೆಪಿಎಸ್ಸಿ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದ ವೇಳೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಿಲ್ಲಿಯಲ್ಲಿ ನಡೆಯುತ್ತಿರುವ ರಾಷ್ಟ್ರ ವಿರೋಧಿ ಹೋರಾಟಗಳಿಗೆ ಕಾಂಗ್ರೆಸ್‍ನಿಂದ ನೆರವು ಸಿಗುತ್ತಿದೆ ಎಂಬುದನ್ನು ಗೃಹ ಸಚಿವ ಪ್ರಿಯಾಂಕ ಖರ್ಗೆ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಖರ್ಗೆ ನೀಡಿರುವ ಹೇಳಿಕೆಯೇ ಇದಕ್ಕೆ ಸಾಕ್ಷಿ ಎಂದರು.

ಕಾಂಗ್ರೆಸ್-ಸಿಜೆಪಿ ಎರಡೂ ಒಂದೇ ಎಂದು ಹೇಳಿದ್ದಾರೆ. ಸಿಜೆಪಿ ಏನೇ ಗಲಾಟೆ ಮಾಡಿದರೂ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎನ್ನುವ ಮೂಲಕ ನೆರವಾಗಿ ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ಅವರಿಗೊಂದು ಕಾನೂನು, ಬೇರೆಯವರಿಗೊಂದು ಕಾನೂನು ಇದೆಯೇ? ಜವಾಬ್ದಾರಿ ಸ್ಥಾನದಲ್ಲಿರುವ ಗೃಹಸಚಿವರು ಇಂತಹ ಹೇಳಿಕೆ ನೀಡಿರುವುದು ಅಘಾತಕಾರಿ. ರಾಷ್ಟ್ರದಲ್ಲಿ ಎಂತಹ ಅಹಿತಕರ ಘಟನೆಗಳು ನಡೆಯುತ್ತಿವೆ ಎಂಬುದು ಗೊತ್ತಿದೆ. ಕನ್ನಡಿಗರ ತೆರಿಗೆ ಹಣವನ್ನು ದಿಲ್ಲಿಯ ಗಲಭೆಕೋರರಿಗೆ ರವಾನೆ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪ ಮಾಡಿದರು.

ಅಗತ್ಯಬಿದ್ದರೆ ಕುಮಾರಸ್ವಾಮಿಯನ್ನು ವಿಚಾರಣೆಗೆ ಕರೆಸುತ್ತೇವೆ ಎಂಬ ಪ್ರಿಯಾಂಕ ಖರ್ಗೆ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಲವೇ ನಿರ್ಣಯ ಮಾಡುತ್ತದೆ. ಅವರ ದುರಹಂಕಾರಕ್ಕೆ ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ. ಸಿದ್ದಾರ್ಥ ಟ್ರಸ್ಟ್ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಮಲ್ಲಿಕಾರ್ಜುನ ಖರ್ಗೆ ಯಾಕೆ ಹೋಗಿದ್ದರು? ಇದಕ್ಕೆ ಪ್ರಿಯಾಂಕ್ ಖರ್ಗೆ ಉತ್ತರ ನೀಡುತ್ತಾರಾ? ಎಂದು ಅವರು ಪ್ರಶ್ನಿಸಿದರು.

ಗ್ರಾಮೀಣಾಭಿವೃದ್ಧಿ ಮಂತ್ರಿಗಳಿದ್ದಾಗ ಕೆಪಿಎಸ್ಸಿಯಿಂದ 24 ಎಂಜಿನಿಯರುಗಳ ಆಯ್ಕೆ ಪ್ರಕ್ರಿಯೆಯಲ್ಲಿ 10 ಅಭ್ಯರ್ಥಿಗಳು ಅಕ್ರಮದ ಮುಖಾಂತರ ಆಯ್ಕೆಯಾಗಿದ್ದರು. ಈ ನೇಮಕಾತಿಯನ್ನು ರದ್ದುಗೊಳಿಸುವಂತೆ ಕೆಪಿಎಸ್ಸಿಯಲ್ಲಿ ತನಿಖೆಯಾಗಿ ವರದಿ ನೀಡಿದರೂ ಅದನ್ನು ಏಕಾಏಕಿ ತಿರಸ್ಕಾರ ಮಾಡಿ ಅಕ್ರಮ ಎಸಗಿದ್ದ 24 ಜನರಿಗೆ ನೇಮಕಾತಿ ಆದೇಶ ಯಾಕೆ ನೀಡಿದಿರಿ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಪಶುವೈದ್ಯಕೀಯ ಅಭ್ಯರ್ಥಿಗಳ ಆಯ್ಕೆಯಲ್ಲಿಯೂ ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ಹೈಕೋರ್ಟ್ ತನಿಖೆಗೆ ಆದೇಶಿಸಿದರೆ ಅಲ್ಲಿ ಹೋಗಿ ಯಾಕಾಗಿ ತಡೆಯಾಜ್ಞೆ ತರುತ್ತೀರಿ? ನೀವು ಪಾರದರ್ಶಕವಾಗಿದ್ದರೆ ನ್ಯಾಯಯುತ ತನಿಖೆಗೆ ಅವಕಾಶ ನೀಡಬೇಕಿತ್ತು, 'ಕಳ್ಳನ ಮನಸ್ಸು ಹುಳ್ಳುಳ್ಳಿಗೆ' ಎನ್ನುವಂತೆ ಖರ್ಗೆಯವರೇ ನಿಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದೀರಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಯಾರೋ ಪಾಪದ ಹುಡುಗರನ್ನು, ಪೋಸ್ಟ್ ಮಾಡುತ್ತಾರೆಂದು ಕರೆತಂದು ಅವರ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದೀರಿ. ತನಿಖಾ ಅಧಿಕಾರಿಗಳು ಅನಗತ್ಯವಾಗಿ ಸಮಸ್ಯೆ ತಂದಿಟ್ಟುಕೊಂಡರೆ ಮುಂದೆ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದೇನೆಯೇ ಹೊರತು, ತಾನು ಯಾರಿಗೂ ಧಮ್ಕಿ ಹಾಕಿಲ್ಲ. ಧಮ್ಕಿ ಹಾಕುವ ಶೈಲಿ ನಿಮ್ಮದು ಎಂದು ಕುಮಾರಸ್ವಾಮಿ ಕಿಡಿಕಾರಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor