ಬೆಂಗಳೂರು :  ಜೆಫ್ರಿ ಎಪ್‍ಸ್ಟೀನ್‍ನೊಂದಿಗೆ ನಂಟು ಹೊಂದಿರುವ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಯನ್ನು ಕೂಡಲೇ ವಜಾಗೊಳಿಸಬೇಕು. ಹಾಗೆಯೇ ಪ್ರಧಾನ ಮಂತ್ರಿ ಮೋದಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಆಗ್ರಹಿಸಿದ್ದಾರೆ.

ಗುರುವಾರ ಇಲ್ಲಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಆವರಣದಲ್ಲಿ ‘ನರಭಕ್ಷಕ ಜೆಫ್ರಿ ಎಪ್‍ಸ್ಟೀನ್‍ನ ಜೊತೆ ಇರುವ ಹರ್ದೀಪ್ ಸಿಂಗ್ ಪುರಿಯನ್ನು ವಜಾ’ಗೊಳಿಸುವಂತೆ ಒತ್ತಾಯಿಸಿ ನಡೆದ ಧರಣಿಯಲ್ಲಿ ಮಾತನಾಡಿದ ಅವರು, ಕೊಲೆಗಡಕನ ಪ್ರಕರಣದ ದಾಖಲೆಗಳ ಕುರಿತು ಅಮೆರಿಕ ನ್ಯಾಯಾಲಯವು ಹರ್ದೀಪ್ ಸಿಂಗ್ ಪುರಿ ಇರುವ ಫೋಟೋಗಳನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕ ವಲಯದಲ್ಲಿ ಗಂಭೀರ ಪ್ರಶ್ನೆಗಳು ಎದ್ದಿವೆ ಎಂದರು.

ಈ ಹಿನ್ನೆಲೆಯಲ್ಲಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿ, ಸತ್ಯಾಂಶಗಳನ್ನು ಜನರ ಮುಂದಿಡಬೇಕು. ಕೇಂದ್ರ ಸರಕಾರ ಕೂಡಲೇ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಮಕ್ಕಳ ಮೇಲಿನ ಲೈಂಗಿಕ ಶೋಷಣೆಯಂತಹ ಗಂಭೀರ ವಿಚಾರಗಳಲ್ಲಿ ಸತ್ಯವನ್ನು ಮರೆಮಾಚದೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಎಪ್‍ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ತಮ್ಮ ಸಂಪರ್ಕಗಳ ಸ್ವರೂಪ ಮತ್ತು ಸಂದರ್ಭಗಳ ಕುರಿತು ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಈ ವಿಚಾರದಲ್ಲಿ ತಮ್ಮ ಸರಕಾರದ ನಿಲುವನ್ನು ಸ್ಪಷ್ಟಪಡಿಸಿ, ದೇಶದ ಜನರ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಅವರು ತಿಳಿಸಿದರು.

ಧರಣಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎ. ಆನಂದ್, ಕುಶಾಲ್ ಹರುವೇಗೌಡ, ಲಕ್ಷ್ಮೀನಾರಾಯಣ್, ಪುಟ್ಟರಾಜು, ಓಬಲೇಶ್, ಉಮೇಶ್ ಸಾಯಿ ನವೀನ್ ಮುಂತಾದ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor