ಕೆ.ಆರ್.ಪುರಂನಿಂದ ಹೆಬ್ಬಾಳ ವರೆಗಿನ ನೀಲಿ ಮಾರ್ಗ ಮೆಟ್ರೋ ಕಾಮಗಾರಿ ಶೀಘ್ರ ಮುಗಿಸಿ : ಕೃಷ್ಣಬೈರೇಗೌಡ ಸೂಚನೆ
ಬೆಂಗಳೂರು : ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಮೆಟ್ರೋ ಜಾಲ ವಿಸ್ತರಣೆ, ಉಪನಗರ ರೈಲು ಯೋಜನೆ ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ದೀರ್ಘಕಾಲಿಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆ ನಿಟ್ಟಿನಲ್ಲಿ ಬಹು ನಿರೀಕ್ಷಿತವಾದ ಕೆ.ಆರ್.ಪುರಂನಿಂದ ಹೆಬ್ಬಾಳವರೆಗಿನ ನೀಲಿ ಮಾರ್ಗ ಮೆಟ್ರೋ ಕಾಮಗಾರಿಯನ್ನು ಶೀಘ್ರ ಮುಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಗುರುವಾರ ನೀಲಿ ಮಾರ್ಗ ಮೆಟ್ರೋ ಕಾಮಗಾರಿ ಸ್ಥಳ ಪರಿಶೀಲನೆ ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾಹಿತಿ ಹಂಚಿಕೊಂಡ ಅವರು, ಬೆಂಗಳೂರು ನಗರಕ್ಕೆ ಅತ್ಯಂತ ಅವಶ್ಯಕವಾದ ಕೆ.ಆರ್.ಪುರಂನಿಂದ ಹೆಬ್ಬಾಳ ಮತ್ತು ಹೆಬ್ಬಾಳದಿಂದ ವಿಮಾನ ನಿಲ್ದಾಣದವರೆಗಿನ ಮೆಟ್ರೋ ಮಾರ್ಗವು ನೀಲಿ ಮಾರ್ಗದ ಅಡಿಯಲ್ಲಿ ಬರುತ್ತದೆ. ಇದು ಒಟ್ಟು ಸುಮಾರು 60 ಕಿ.ಮೀ. ಉದ್ದದ ಲೈನ್ ಆಗಲಿದೆ. ಈ ಯೋಜನೆ ಪೂರ್ಣಗೊಂಡರೆ ಬೆಂಗಳೂರು ಜನರಿಗೆ ದೊಡ್ಡ ಮಟ್ಟದ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ಕೆ.ಆರ್.ಪುರದಿಂದ ನಾಗವಾರ ಮತ್ತು ಅಲ್ಲಿಂದ ಹೆಬ್ಬಾಳದವರೆಗಿನ ಮಾರ್ಗವು ಅತ್ಯಂತ ಸಂಕೀರ್ಣವಾಗಿದ್ದು, ಕಾಮಗಾರಿಗಳು ತಡವಾಗಿವೆ. ಕೆ.ಆರ್.ಪುರಂ ಬಳಿ 2ಎ ಹಂತದ ಕಾಮಗಾರಿ ಆರಂಭಿಸಲು ಮರಗಳನ್ನು ಕಡಿಯುವುದಕ್ಕೆ ನ್ಯಾಯಾಲಯದಿಂದ ಒಂದು ವರ್ಷ ಕಾಲ ತಡೆಯಾಜ್ಞೆ ಇದ್ದ ಕಾರಣ, ಕಾಮಗಾರಿ ನಿಗದಿತ ಅವಧಿಗಿಂತ ಕನಿಷ್ಠ ಒಂದು ವರ್ಷ ವಿಳಂಬವಾಗಿದೆ. ಇತರೆ ನಗರಗಳಲ್ಲಿ ಮೆಟ್ರೋ ಕಾಮಗಾರಿಗೆ ಮರ ಕಡಿಯಲು ಹೈಕೋರ್ಟ್ ವರೆಗೆ ಹೋಗುವ ಅಗತ್ಯವಿರುವುದಿಲ್ಲ, ಆದರೆ, ಬೆಂಗಳೂರಿನಲ್ಲಿ ಪಿಐಎಲ್ ಹಾಕಿ, ಟ್ರೀ ಕಮಿಟಿ ಮತ್ತು ಹೈಕೋರ್ಟ್ ಅನುಮತಿ ಪಡೆದು, ಪ್ರತಿಯೊಂದು ಮರ ಕಡಿಯುವುದಕ್ಕೂ ಕಠಿಣವಾದ ಪ್ರಕ್ರಿಯೆಯನ್ನು ಪಾಲಿಸಬೇಕಾಗಿದೆ ಎಂದು ಸಚಿವರು ಹೇಳಿದರು.
ಇದರ ಜೊತೆಗೆ, ವೀರಣ್ಣಪಾಳ್ಯದಿಂದ ಹೆಬ್ಬಾಳದವರೆಗಿನ ಕಾಮಗಾರಿ ಸೇರಿದಂತೆ ಹಲವು ಕಡೆಗಳಲ್ಲಿ ಕಾವೇರಿ ನೀರು ಸರಬರಾಜು ಪೈಪ್ಲೈನ್ಗಳು ಮತ್ತು ಒಳಚರಂಡಿ ಲೈನ್ಗಳು ಅಡ್ಡಿಯಾಗಿವೆ. ಇವುಗಳನ್ನು ತೆರವುಗೊಳಿಸಿ ಹೊಸ ಲೈನ್ಗಳನ್ನು ಹಾಕಲು ಸುಮಾರು 6ರಿಂದ 8 ತಿಂಗಳು ಕಾಲ ವಿಳಂಬವಾಗಿದೆ. ಹೊರವರ್ತುಲ ರಸ್ತೆಯಲ್ಲಿ ಅತಿಯಾದ ವಾಹನ ದಟ್ಟಣೆ ಇರುವುದರಿಂದ, ಹಗಲಿನಲ್ಲಿ ಕೆಲಸ ಮಾಡಲು ಸಾಧ್ಯವಾಗದೆ ಕೇವಲ ರಾತ್ರಿ 7 ಗಂಟೆಯಿಂದ ಬೆಳಗಿನ ಜಾವದವರೆಗೆ ಮಾತ್ರ ಕೆಲಸ ಮಾಡಬೇಕಾಗಿರುವುದು ಮತ್ತೊಂದು ತೊಂದರೆಯಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಇಂತಹ ಸಂಕೀರ್ಣವಾದ ಕಾಮಗಾರಿಗಳನ್ನು ಮಾಡುವಾಗ ಸಣ್ಣಪುಟ್ಟ ಸಮಸ್ಯೆಗಳು ಬರುವುದು ಸಹಜವಾದರೂ, ಸಂಬಂಧಪಟ್ಟ ಗುತ್ತಿಗೆದಾರರು ನಿರೀಕ್ಷಿತ ಮಟ್ಟದಲ್ಲಿ ಮತ್ತು ವೇಗವಾಗಿ ಸ್ಪಂದಿಸುತ್ತಿಲ್ಲ. ಆದರೂ ಸರಕಾರದ ಕಡೆಯಿಂದ ಅವರ ಬೆನ್ನೇರಿ ಕೆಲಸವನ್ನು ಮಾಡಿಸಲು ನಿರಂತರ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಒಂದು ವರ್ಷ ತಡವಾಗಿದ್ದು, ಇನ್ನೂ ವಿಳಂಭ ಮಾಡದೆ ಅಕ್ಟೋಬರ್ ಕೊನೆಯೊಳಗೆ ಟ್ರಯಲ್ ರನ್ ಮಾಡಬೇಕು ಎಂದು ತಾಕೀತು ಮಾಡಿದ್ದೇನೆ ಎಂದು ಕೃಷ್ಣ ಬೈರೇಗೌಡ ವಿವರಿಸಿದರು.
ಉಪನಗರ ರೈಲು-ಸಾರ್ವಜನಿಕ ಸಾರಿಗೆ ಅಭಿವೃದ್ಧಿ: ‘ನಮ್ಮ ಮೆಟ್ರೋ ದೊಂದಿಗೆ ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆಯಡಿ ಬೆಂಗಳೂರು ಸುತ್ತಮುತ್ತ 148 ಕಿ.ಮೀ. ವ್ಯಾಪ್ತಿಯ ಉಪನಗರ ರೈಲು ಜಾಲವನ್ನು ವಿಸ್ತರಿಸಲು ಕಾಮಗಾರಿಗಳು ನಡೆಯುತ್ತಿವೆ. 2030ರ ಎಪ್ರಿಲ್ ವೇಳೆಗೆ ಈ ಯೋಜನೆಯನ್ನು ಸಂಪೂರ್ಣಗೊಳಿಸಲು ಗುರಿ ಇಡಲಾಗಿದ್ದು, ಸುಮಾರು 23ಸಾವಿರ ಕೋಟಿ ರೂ. ಅನುದಾನವನ್ನು ಇದಕ್ಕೆ ವೆಚ್ಚ ಮಾಡಲಾಗುತ್ತಿದೆ. ಬಿಎಂಟಿಸಿ ಬಸ್ಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಸುಮಾರು 7 ಸಾವಿರ ಬಸ್ಗಳನ್ನು ಹೊಂದಿರುವ ಬಿಎಂಟಿಸಿಗೆ, ಮುಂಬರುವ ದಿನಗಳಲ್ಲಿ ಹೆಚ್ಚುವರಿಯಾಗಿ 4,500 ಎಲೆಕ್ಟ್ರಿಕ್ ಬಸ್ಗಳನ್ನು ಖರೀದಿಸಲು ಸರಕಾರದಿಂದ ಒಪ್ಪಿಗೆ ನೀಡಲಾಗಿದೆ. ಮುಂದಿನ ಒಂದೆರಡು ವರ್ಷಗಳಲ್ಲಿ ಇವೆಲ್ಲವೂ ಕಾರ್ಯರೂಪಕ್ಕೆ ಬಂದರೆ ನಗರದ ಟ್ರಾಫಿಕ್ ಸಮಸ್ಯೆಗೆ ಶೇ.50ರಷ್ಟು ಪರಿಹಾರ ಸಿಗಲಿದೆ’
-ಕೃಷ್ಣ ಬೈರೇಗೌಡ ಜಿಬಿಎ ಸಚಿವ