ಬೆಂಗಳೂರು : ರಾಜ್ಯ ಸರಕಾರ ಹಾಲು ಮತ್ತು ಬಸ್ ಪ್ರಯಾಣ ದರಗಳನ್ನು ಏರಿಕೆ ಮಾಡಿರುವುದನ್ನು ಖಂಡಿಸಿ, ದರ ಏರಿಕೆ ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ಮಾರ್ಕ್ಸ್‌ ವಾದಿ ಕಮ್ಯುನಿಸ್ಟ್ ಪಕ್ಷ (ಸಿಪಿಎಂ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ಬಿ.ಎನ್.ಮಂಜುನಾಥ್, ಕೇಂದ್ರದ ಬಿಜೆಪಿ ಸರಕಾರದ ನೀತಿಗಳಿಂದಾಗಿ ಅಕ್ಕಿ, ಬೇಳೆ, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಹಾಗೂ ಔಷಧಿಗಳ ಸಹಿತ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ನಡುವೆಯೇ ರಾಜ್ಯ ಸರಕಾರ ಹಾಲು ಮತ್ತು ಬಸ್ ಪ್ರಯಾಣ ದರಗಳನ್ನು ಹೆಚ್ಚಿಸುವ ಮೂಲಕ ಜನರ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಹೇರಿದೆ ಎಂದು ಆರೋಪಿಸಿದರು.

ಹಾಲು ಉತ್ಪಾದಕ ರೈತರಿಗೆ ಸಹಾಯಧನ ಹೆಚ್ಚಿಸುವ ಬದಲು ಗ್ರಾಹಕರ ಮೇಲೆ ಬೆಲೆ ಏರಿಕೆಯ ಹೊರೆ ಹಾಕಲಾಗಿದೆ. ವಿವಿಧ ಮಾದರಿಯ ಹಾಲಿನ ದರವನ್ನು ಲೀ.ಗೆ 8ರಿಂದ 15 ರೂ.ವರೆಗೆ, ಮೊಸರಿನ ದರವನ್ನು 14 ರೂ.ಹೆಚ್ಚಿಸಲಾಗಿದೆ. ತುಪ್ಪ, ಬೆಣ್ಣೆ, ಪನ್ನೀರು ಸೇರಿದಂತೆ ಹಾಲಿನ ಉತ್ಪನ್ನಗಳ ದರವನ್ನು ಶೇ.20ರಿಂದ 30ರಷ್ಟು ಹೆಚ್ಚಿಸಲಾಗಿದೆ ಎಂದು ಅವರು ದೂರಿದರು.

ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಶೇ.26 ರಿಂದ 67ರಷ್ಟು, ಕೆಎಸ್ಸಾರ್ಟಿಸಿ ಪ್ರಯಾಣ ದರವನ್ನು ಶೇ.20ರಿಂದ 30ರಷ್ಟು ಹಾಗೂ ಬಸ್ ಪಾಸ್ ದರವನ್ನು ಶೇ.25ರಷ್ಟು ಹೆಚ್ಚಿಸಲಾಗಿದೆ. ಕಾರ್ಮಿಕರ ಪರಿಷ್ಕೃ ತ ಕನಿಷ್ಠ ವೇತನ ಜಾರಿಗೊಳಿಸದ ಸರಕಾರ, ಬೆಲೆ ಏರಿಕೆಯ ಮೂಲಕ ದುಡಿಯುವ ವರ್ಗದ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ರಾಜ್ಯ ಸರಕಾರ ಕೂಡಲೇ ಬಸ್ ಪ್ರಯಾಣ ದರ ಏರಿಕೆಯನ್ನು ಹಿಂಪಡೆಯಬೇಕು. ಹಾಲು ಉತ್ಪಾದಕ ರೈತರಿಗೆ ಹೆಚ್ಚಿನ ಸಹಾಯಧನ ನೀಡಿ, ಹಾಲಿನ ದರ ಏರಿಕೆಯನ್ನು ರದ್ದುಗೊಳಿಸಬೇಕು ಎಂದು ಮಂಜುನಾಥ್ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಪಿಎಂ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಗೌರಮ್ಮ, ಎನ್.ಪ್ರತಾಪ್ ಸಿಂಹ, ಕೆ.ಎಸ್. ಲಕ್ಷ್ಮಿ, ಶ್ರೀಪತಿ ಸಿ.ಜಿ., ಪಿ.ಮುನಿರಾಜು, ಚಂದ್ರಶೇಖರ್, ಹುಳ್ಳಿ ಉಮೇಶ್, ಗೋಪಾಲಗೌಡ, ಸ್ವಾಮಿರಾಜು, ಪಿ.ಸುರೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor