ಬೆಂಗಳೂರು: ಕೆಲವರಿಗೆ ಅವರ ಮನೆಯಲ್ಲಿ ಮಕ್ಕಳಾದರೂ ಆರೆಸ್ಸೆಸ್ ನೆನಪಾಗುತ್ತದೆ ಎಂದು ಹೇಳಿರುವ ಸಿ.ಟಿ.ರವಿ, ನಿಮ್ಮ ಮಾತಿನಲ್ಲಿರುವುದು ರಾಜಕೀಯ ವ್ಯಂಗ್ಯವಲ್ಲ, ಹೆಣ್ಣಿನ ಹೆರಿಗೆ ಮತ್ತು ತಾಯ್ತನವನ್ನು ರಾಜಕೀಯ ಕೆಸರೆರಚಾಟಕ್ಕೆ ಎಳೆದು ತರುವ ಅತ್ಯಂತ ಹೀನ ಮನಸ್ಥಿತಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಕಿಡಿಗಾರಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಮಾತೆತ್ತಿದರೆ ಭಾರತೀಯ ಸಂಸ್ಕೃತಿ, ಮಹಿಳೆಯರ ಗೌರವ, ಮಾತೃಶಕ್ತಿ ಎಂದು ಬಿಟ್ಟಿ ಪ್ರವಚನ ಮಾಡುವ ಸಂಘಪರಿವಾರದ ನಾಯಕರ ನಾಲಿಗೆಯಿಂದ ಇಂತಹ ಮಾತುಗಳು ಹೊರಬರುವುದರಲ್ಲಿ ಆಶ್ಚರ್ಯವೇನಿಲ್ಲ. ಹೆಣ್ಣಿನ ತಾಯ್ತನವನ್ನೂ ರಾಜಕೀಯ ಅಪಹಾಸ್ಯದ ಸರಕನ್ನಾಗಿ ಮಾಡಿಕೊಳ್ಳುವಷ್ಟು ನಿಮ್ಮ ಚಿಂತನೆಯೇ ದಿವಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿ.ಟಿ.ರವಿಯವರೇ, ಮಹಾಮಾನವ ನರೇಂದ್ರ ಮೋದಿಗೆ ಬೆಳಗಾದರೆ ನೆಹರೂ ನೆನಪಾಗುತ್ತಾರೆ, ಸಂಜೆಯಾದರೆ ರಾಜೀವ್ ಗಾಂಧಿ ನೆನಪಾಗುತ್ತಾರೆ. ದೇಶದಲ್ಲಿ ಮಳೆ ಬಂದರೂ ನೆಹರೂ, ಬರ ಬಂದರೂ ನೆಹರೂ, ಬೆಲೆ ಏರಿದರೂ ನೆಹರೂ, ಆಡಳಿತ ವೈಫಲ್ಯವಾದರೂ ನೆಹರೂ. ನಿಮ್ಮದೇ ವಿಕೃತ ತರ್ಕವನ್ನು ನಿಮ್ಮ ನಾಯಕರಿಗೆ ಅನ್ವಯಿಸಿದರೆ? ಎಂದು ಅವರು ಪ್ರಶ್ನಿಸಿದ್ದಾರೆ.

‘ತನ್ನ ಬೆನ್ನಿನ ಕೊಳಕು ಕಾಣದವನು ಪರರ ಬೆನ್ನಿನ ಧೂಳು ಎಣಿಸಿದನಂತೆ!’ ಸಿ.ಟಿ. ರವಿಯವರೇ, ರಾಜಕೀಯ ವಿರೋಧಿಗಳನ್ನು ಟೀಕಿಸಲು ವಿಚಾರಗಳಿಲ್ಲದಾಗ ಮಹಿಳೆಯ ತಾಯ್ತನವನ್ನು ಎಳೆದುತರುವ ನಿಮ್ಮಂತವರು ಮಹಿಳಾ ಗೌರವದ ಬಗ್ಗೆ ಮಾತಾಡುವುದು ನಾಚಿಕೆಗೇಡು. ಹೆಣ್ಣನ್ನು ದೇವತೆ ಎಂದು ಪೂಜಿಸುವ ಭಾಷಣ ಮಾಡುವುದು, ಅದೇ ಹೆಣ್ಣಿನ ತಾಯ್ತನವನ್ನು ಬೀದಿ ರಾಜಕೀಯದ ವ್ಯಂಗ್ಯಕ್ಕೆ ಬಳಸುವುದು ಇದು ಸಂಸ್ಕೃ ತಿಯಲ್ಲ, ಸಂಘಪರಿವಾರದ ಮಾತುಗಳಲ್ಲೆ ಬಯಲಾಗುತ್ತಿರುವ ವಿಕೃತಿ ಎಂದು ಹರಿಪ್ರಸಾದ್ ಹೇಳಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor