ಬೆಂಗಳೂರು : ಹೊರನಾಡಿನ ಕನ್ನಡಿಗ ವಿದ್ಯಾರ್ಥಿಗಳಿಗೆ ಪಿಜಿ ಸಿಇಟಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಆ ಮೂಲಕ ಪರೀಕ್ಷೆಯಲ್ಲಿ ಭಾಗವಹಿಸಿ ಉತ್ತಮ ಅಂಕ ಗಳಿಸಿದರೂ ಕಾಲೇಜು ಹಂಚಿಕೆಯನ್ನು ನಿರಾಕರಿಸಿರುವುದು ಅನ್ಯಾಯದ ಕ್ರಮವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಈ ಕುರಿತಂತೆ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕರು ಹಾಗೂ ಉನ್ನತ ಶಿಕ್ಷಣ ಇಲಾಖಾಧಿಕಾರಿಗಳಿಗೆ ಪತ್ರ ಬರೆದಿರುವ ಬಿಳಿಮಲೆ, ಸರ್ಕಾರದ ಈ ಕ್ರಮ ಹೊರನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ರಾಜ್ಯದ ಉನ್ನತ ಶಿಕ್ಷಣದಲ್ಲಿ ಮೀಸಲಾತಿಯನ್ನು ಕಲ್ಪಿಸುವ ಸರ್ಕಾರದ ನಿಯಮಗಳ ಸ್ಪಷ್ಟ ಉಲ್ಲಂಘನೆಯಷ್ಟೇ ಅಲ್ಲ, ಇದು ಅಖಂಡ ಕರ್ನಾಟಕ ಭಾವಕ್ಕೆ ಧಕ್ಕೆ ತರುವ ವಿಷಯವಾಗಿದ್ದು, ಹೊರನಾಡು ಕನ್ನಡಿಗರ ಆತ್ಮವಿಶ್ವಾಸವನ್ನು ಕಸಿಯುವ ಪ್ರಕ್ರಿಯೆಯಾಗಿದೆ ಎಂದಿದ್ದಾರೆ.

ಕರ್ನಾಟಕದ ಹೊರಗೆ ನೆಲೆಸಿದ್ದರೂ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಅಸ್ಮಿತೆಯೊಂದಿಗೆ ನಿರಂತರ ಸಂಬಂಧವನ್ನು ಉಳಿಸಿಕೊಂಡಿರುವ ಹೊರನಾಡಿನ ಕನ್ನಡಿಗರ ಮಕ್ಕಳಿಗೆ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವ ಯಾವ ಅವಕಾಶವನ್ನೂ ಕರ್ನಾಟಕ ಸರ್ಕಾರವು ನಿರಾಕರಿಸಬಾರದೆಂದು ಹೇಳಿರುವ ಬಿಳಿಮಲೆ, ಈ ನಿಟ್ಟಿನಲ್ಲಿ ಸರ್ಕಾರವು ರೂಪಿಸಿರುವ ನೀತಿ ಮತ್ತು ಪ್ರವೇಶಾತಿ ನಿಯಮಗಳ ಅನುಷ್ಠಾನದಲ್ಲಿ ಯಾವುದೇ ತಾರತಮ್ಯ ಉಂಟಾಗಬಾರದು. ಪರೀಕ್ಷೆ ಬರೆಯಲು ಅರ್ಹರೆಂದು ಪರಿಗಣಿಸಿ ಅವಕಾಶ ನೀಡಿದ ಮೇಲೆ ಪರೀಕ್ಷೆಯಲ್ಲಿ ಪಡೆದ ಉನ್ನತ ಅಂಕಗಳನ್ನು ಆಧರಿಸಿ ಕಾಲೇಜು ಹಂಚಿಕೆ ಮಾಡುವ ಸಂದರ್ಭದಲ್ಲಿಯೂ ನ್ಯಾಯಸಮ್ಮತವಾದ ಪರಿಗಣನೆ ದೊರೆಯುವುದು ಅಗತ್ಯವಾಗಿದೆ ಎಂದಿದ್ದಾರೆ.

ಕೂಡಲೇ 2026ರ ಪಿಜಿ ಸಿಇಟಿ ಬರೆದಿರುವ ಅರ್ಹ ಹೊರನಾಡಿನ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ಕ್ರಮ ವಹಿಸಬೇಕೆಂದು ಆಗ್ರಹಿಸಿರುವ ಬಿಳಿಮಲೆ, ಅಂತಹ ವಿದ್ಯಾರ್ಥಿಗಳಿಗೆ ಯಾವುದೇ ಷರತ್ತು ವಿಧಿಸದೇ ಕಾಲೇಜು ಹಂಚಿಕೆ ಮಾಡಿ ಪ್ರವೇಶಾತಿ ಪಡೆಯಲು ಅವಕಾಶ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor