ಬೆಂಗಳೂರು : ಬೆಂಗಳೂರಿನಲ್ಲಿ ಸಮರ್ಪಕ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಕಾಂಗ್ರೆಸ್ ಸರಕಾರವು, ಕೇವಲ ಬೆಲೆ ಏರಿಕೆ ಮಾಡಿಕೊಂಡು ಹಣಕಾಸು ಪರಿಸ್ಥಿತಿಯನ್ನು ನಿಬಾಯಿಸುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಶನಿವಾರ ಪುಲಕೇಶಿ ನಗರ ಕ್ಷೇತ್ರದಲ್ಲಿ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಭಾಗದ ಜನರು ಕುಡಿಯುವ ನೀರು ಮತ್ತು ಚರಂಡಿ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಪುಲಕೇಶಿ ನಗರದಲ್ಲಿ ಪ್ರಸ್ತುತ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಸುಮಾರು 250 ಕೋಟಿಗೂ ಹೆಚ್ಚು ತೆರಿಗೆ ಹಣ ಲೂಟಿಯಾಗಿದ್ದು, ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ ಎಂದು ಆರೋಪಿಸಿದರು.

ದರ ಏರಿಕೆ ವಿರುದ್ಧ ವಾಗ್ದಾಳಿ: ರಾಜ್ಯ ಸರಕಾರವು ಪ್ರತಿ ಲೀ.ಹಾಲಿನ ಮೇಲೆ 10 ರಿಂದ 12ರೂ. ಏರಿಕೆ ಮಾಡಿದ್ದು, ಇದು ಬಡವರ ಮತ್ತು ಶ್ರಮಿಕರ ಜೀವನವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ರೈತರಿಗೆ ಹಾಲಿನ ದರ ಹೆಚ್ಚಳ ಮಾಡುವುದಕ್ಕೆ ವಿರೋಧವಿಲ್ಲ, ಆದರೆ ಆ ಹಣ ರೈತರಿಗೂ ತಲುಪುತ್ತಿಲ್ಲ. ಬದಲಾಗಿ, ಮಕ್ಕಳಿರುವ ಬಡ ಕುಟುಂಬಗಳು ಹಾಲು, ಮೊಸರು ಖರೀದಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಟೀಕಿಸಿದರು.

ಇದರ ಜತೆಗೆ, ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಶೇ.45ರಷ್ಟು ಹೆಚ್ಚಿಸಲಾಗಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವುದಾಗಿ ಹೇಳಿ, ಮತ್ತೊಂದೆಡೆ ಬಸ್ ದರ ಹಾಗೂ ಪಾಸ್ ದರಗಳನ್ನು ಏರಿಕೆ ಮಾಡಿ ಜನರ ಮೇಲೆ ಹೊರೆ ಹಾಕಲಾಗುತ್ತಿದೆ ಎಂದು ಕುಮಾರಸ್ವಾಮಿ ದೂರಿದರು.

ಕೇಂದ್ರ ಸರಕಾರವು ಉಚಿತವಾಗಿ ನೀಡುತ್ತಿರುವ 5 ಕೆ.ಜಿ ಅಕ್ಕಿಯನ್ನು ರಾಜ್ಯ ಸರಕಾರವು ತಾನೇ ನೀಡುತ್ತಿರುವುದಾಗಿ ಬಿಂಬಿಸಿಕೊಳ್ಳುತ್ತಿದೆ. ಒಂದು ವೇಳೆ ಕೇಂದ್ರ ಸರಕಾರ ಈ ಅಕ್ಕಿಯನ್ನು ನೀಡದಿದ್ದರೆ, ರಾಜ್ಯ ಸರಕಾರ ಜನರನ್ನು ಇನ್ನಷ್ಟು ಕಷ್ಟಕ್ಕೆ ದೂಡುತ್ತಿತ್ತು ಎಂದು ಅವರು ಹೇಳಿದರು.

ತಾಯಂದಿರಿಗೆ ಗೃಹಲಕ್ಷ್ಮಿ ಯೋಜನೆಯಡಿ ನೀಡುವ 2 ಸಾವಿರ ರೂ.ಗಳು ಬಿಡುಗಡೆಯಾಗುತ್ತಿಲ್ಲ, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಮತ್ತು ಯುವಕರಿಗೆ ಉದ್ಯೋಗವಿಲ್ಲ. ತಮ್ಮ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯಲು ಜನರು ಪ್ರತಿಭಟನೆ ಮಾಡಲು ಮುಂದಾದರೆ. ಅದಕ್ಕೂ ಅವಕಾಶ ನೀಡುತ್ತಿಲ್ಲ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿದ್ದ ಇರ್ಫಾನ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor